ಬೆಂಗಳೂರು, ಏ. 05 (DaijiworldNews/TA): ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಇಂಡಿಗೋ ವಿಮಾನದಲ್ಲಿನ ಹುಸಿ ಬಾಂಬ್ ಬೆದರಿಕೆ ಪ್ರಕರಣ ಆತಂಕ ಸೃಷ್ಟಿಸಿತು. ದೆಹಲಿಗೆ ತೆರಳುತ್ತಿದ್ದ ವಿಮಾನದ ಶೌಚಾಲಯದಲ್ಲಿ ಬಾಂಬ್ ಇದೆ ಎಂದು ಟಿಷ್ಯೂ ಪೇಪರ್ನಲ್ಲಿ ಬರೆದ ಸಂದೇಶ ಪತ್ತೆಯಾಗುತ್ತಿದ್ದಂತೆ ತಕ್ಷಣ ಭದ್ರತಾ ಕ್ರಮ ಕೈಗೊಳ್ಳಲಾಯಿತು.

ಇಂಡಿಗೋ ವಿಮಾನದಲ್ಲಿದ್ದ 183 ಪ್ರಯಾಣಿಕರನ್ನು ತುರ್ತಾಗಿ ಕೆಳಗಿಳಿಸಿ ಸಂಪೂರ್ಣ ತಪಾಸಣೆ ನಡೆಸಲಾಯಿತು. ಪೈಲಟ್ ಏರ್ ಟ್ರಾಫಿಕ್ ಕಂಟ್ರೋಲ್ಗೆ ಮಾಹಿತಿ ನೀಡಿದ ಬಳಿಕ ವಿಮಾನವನ್ನು ಸಂಪೂರ್ಣವಾಗಿ ಪರಿಶೀಲಿಸಲಾಯಿತು.
ಸ್ವಲ್ಪ ಸಮಯ ಆತಂಕದ ವಾತಾವರಣ ನಿರ್ಮಾಣವಾದರೂ, ಯಾವುದೇ ಸ್ಫೋಟಕ ಅಥವಾ ಅನುಮಾನಾಸ್ಪದ ವಸ್ತು ಪತ್ತೆಯಾಗಲಿಲ್ಲ. ಇದರಿಂದ ಇದು ಹುಸಿ ಬೆದರಿಕೆ ಎಂಬುದು ದೃಢಪಟ್ಟಿದ್ದು, ಬಳಿಕ ವಿಮಾನವು ದೆಹಲಿಗೆ ಸುರಕ್ಷಿತವಾಗಿ ಪ್ರಯಾಣ ಮುಂದುವರಿಸಿದೆ. ವಿಮಾನದಲ್ಲಿದ್ದ ಪ್ರಯಾಣಿಕರಲ್ಲೊಬ್ಬರು ಈ ಬೆದರಿಕೆ ಸಂದೇಶ ಬರೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಕಿಡಿಗೇಡಿಗಳನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.