ದಿಸ್ಪುರ, ಏ. 05 (DaijiworldNews/AA): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನುಮತಿ ಇಲ್ಲದೆ ಭಾರತ ಯಾವುದೇ ದೇಶದಿಂದ ತೈಲ ಖರೀದಿಸಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ.

ಅಸ್ಸಾಂನ ಗೋಲಾಘಾಟ್ನಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, "ಟ್ರಂಪ್ ಬಹಿರಂಗವಾಗಿಯೇ ಹೇಳಿದ್ದಾರೆ. ನರೇಂದ್ರ ಮೋದಿ ನನ್ನನ್ನು 'ಸರ್' ಎಂದು ಕರೆಯುತ್ತಾರೆ. ನಾನು ಯಾವಾಗ ಬೇಕಾದರೂ ಅವರ ವೃತ್ತಿಜೀವನವನ್ನು ಕೊನೆಗೊಳಿಸಬಹುದು. ಅಮೆರಿಕದ ಅಧ್ಯಕ್ಷ ಟ್ರಂಪ್ ಅವರು ಮೋದಿ ಬಗ್ಗೆ ಸಂಪೂರ್ಣ ಸತ್ಯವನ್ನು ಒಳಗೊಂಡಿರುವ ಎಪ್ಸ್ಟೀನ್ ಫೈಲ್ ಅನ್ನು ಹೊಂದಿರುವುದರಿಂದ ಅವರು ಹೀಗೆ ಹೇಳುತ್ತಿದ್ದಾರೆ. ಟ್ರಂಪ್ ಅಮೆರಿಕದಲ್ಲಿ ಅದಾನಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿದ್ದಾರೆ. ಏಕೆಂದರೆ ಇದು ಬಿಜೆಪಿಯ ಹಣಕಾಸು ವ್ಯವಸ್ಥೆ ಎಂದು ಅವರಿಗೆ ತಿಳಿದಿದೆ" ಎಂದರು.
"ಈಗ ಪರಿಸ್ಥಿತಿ ಹೀಗಿದೆ. ಟ್ರಂಪ್ ಅನುಮತಿಯಿಲ್ಲದೇ ಭಾರತ ಯಾವುದೇ ದೇಶದಿಂದ ತೈಲವನ್ನು ಖರೀದಿಸಲು ಸಾಧ್ಯವಿಲ್ಲ. ನರೇಂದ್ರ ಮೋದಿ ಭಾರತದ ಇಂಧನ ಭದ್ರತೆ ಮತ್ತು ಡೇಟಾವನ್ನು ಅಮೆರಿಕದ ಕೈಗೆ ಹಸ್ತಾಂತರಿಸಿದ್ದಾರೆ. ಇದು ನರೇಂದ್ರ ಮೋದಿ ರಾಜಿ ಮಾಡಿಕೊಂಡ ಪರಿಣಾಮ" ಎಂದು ಆಕ್ರೋಶ ಹೊರಹಾಕಿದರು.