ಚೆನ್ನೈ, ಏ. 05 (DaijiworldNews/AA): ಯುದ್ಧ ಪೀಡಿತ ಇರಾನ್ ನಲ್ಲಿ ಸಿಲುಕಿಕೊಂಡಿದ್ದ 345 ಮಂದಿ ಭಾರತೀಯ ಮೀನುಗಾರರನ್ನು ಸರ್ಕಾರ ಸುರಕ್ಷಿತವಾಗಿ ವಾಪಸ್ ಕರೆತಂದಿದೆ.

ಅರ್ಮೆನಿಯಾ ಮೂಲಕ ಮೀನುಗಾರರನ್ನು ಹೊತ್ತ ವಿಮಾನ ಶನಿವಾರ ಚೆನ್ನೈಗೆ ಬಂದಿಳಿದಿದೆ. ಸುರಕ್ಷಿತವಾಗಿ ಮರಳಿದ ಭಾರತೀಯರನ್ನು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ವಿಮಾನ ನಿಲ್ದಾಣದಲ್ಲಿ ಹಾಜರಿದ್ದು, ಸ್ವಾಗತಿಸಿದರು. ಈ ಸಂದರ್ಭದಲ್ಲಿ ಭಾರತಕ್ಕೆ ನೆರವಾದ ಅರ್ಮೆನಿಯಾದ ವಿದೇಶಾಂಗ ಸಚಿವ ಅರಾರರ್ ಯಾನ್ ಅವರಿಗೆ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಧನ್ಯವಾದ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ ಡಾ. ಎಸ್. ಜೈಶಂಕರ್, ಅರ್ಮೇನಿಯಾ ಸರ್ಕಾರ ಮತ್ತು ಅಲ್ಲಿನ ವಿದೇಶಾಂಗ ಸಚಿವ ಅರಾರತ್ ಮಿರ್ಜೋಯನ್ ಅವರು ಅರ್ಮೇನಿಯಾ ಮೂಲಕ ಭಾರತೀಯ ಮೀನುಗಾರರನ್ನು ಸ್ಥಳಾಂತರಿಸಲು ಅನುವು ಮಾಡಿಕೊಟ್ಟಿದ್ದಕ್ಕಾಗಿ ತಮ್ಮ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಆರಂಭವಾದಾಗಿನಿಂದ 1,150ಕ್ಕೂ ಹೆಚ್ಚು ಭಾರತೀಯರು ರಸ್ತೆ ಮಾರ್ಗದ ಮೂಲಕ ಅರ್ಮೆನಿಯಾ ಮತ್ತು ಅಜರ್ ಬೈಜಾನ್ ಮಾರ್ಗವಾಗಿ ಭಾರತಕ್ಕೆ ಹಿಂತಿರುಗಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ಸಿಲುಕಿಕೊಂಡಿರುವ ಭಾರತೀಯರ ಸುರಕ್ಷತೆ, ಭದ್ರತೆ ಮತ್ತು ಯೋಗಕ್ಷೇಮದ ದೃಷ್ಟಿಯಿಂದ ಅತ್ಯಂತ ಆದ್ಯತೆಯ ಮೇರೆಗೆ ವಿದೇಶಾಂಗ ಸಚಿವಾಲಯವು ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದೆ.