ಕೂಚ್ಬಿಹಾರ್, ಏ. 05 (DaijiworldNews/AA): ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಕಣ ರಂಗೇರಿದ್ದು, ಪ್ರಧಾನಿ ನರೇಂದ್ರ ಮೋದಿ ಕೂಚ್ಬಿಹಾರ್ನಲ್ಲಿಂದು ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು, ಪಕ್ಷದ ಅಭ್ಯರ್ಥಿಗಳ ಪರ ಮತ ಯಾಚಿಸಿದರು.

ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, "ಆಡಳಿತದಲ್ಲಿ ಮಹಿಳಾ ಪಾಲುದಾರಿಕೆ ಉತ್ತೇಜಿಸಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ದೇಶದಲ್ಲಿ ಮಹಿಳೆಯರ ಕಲ್ಯಾಣಕ್ಕಾಗಿ ಹತ್ತಾರು ಉಪಕ್ರಮಗಳನ್ನು ಜಾರಿ ಮಾಡಿದ್ದು, ಇದರಿಂದ ಲಕ್ಷಾಂತರ ಮಹಿಳೆಯರಿಗೆ ಅನುಕೂಲವಾಗಿದೆ. ಲಕ್ ಪತಿ ದೀದಿ ಯೋಜನೆಯಡಿ 3 ಕೋಟಿಗೂ ಅಧಿಕ ಮಹಿಳೆಯರು ಆರ್ಥಿಕವಾಗಿ ಸಬಲೀಕರಣರಾಗಿದ್ದಾರೆ. ಮಹಿಳೆಯರ ಸುರಕ್ಷತೆ, ಆತ್ಮಾಭಿಮಾನ ರಕ್ಷಣೆ ಮತ್ತು ಸಬಲೀಕರಣ ಪ್ರಮುಖ ಆದ್ಯತೆಯಾಗಿದೆ. ಉತ್ತಮ ಆಡಳಿತಕ್ಕಾಗಿ ಜನತೆ ಬಿಜೆಪಿ ನೇತೃತ್ವವನ್ನು ಬಯಸುತ್ತಿದ್ದಾರೆ" ಎಂದರು.
"2029ರ ಲೋಕಸಭಾ ಚುನಾವಣೆಯಲ್ಲಿ ಮಹಿಳಾ ಮೀಸಲಾತಿ ಕಾಯ್ದೆ ಅನುಷ್ಠಾನ ಸಂಬಂಧ ಚರ್ಚಿಸಲು ಇದೇ ತಿಂಗಳ 16 ರಿಂದ ಮೂರು ದಿನಗಳ ಸಂಸತ್ತಿನ ವಿಶೇಷ ಅಧಿವೇಶನ ಕರೆಯಲಾಗಿದೆ. ಮಹಿಳಾ ಮೀಸಲಾತಿ ಜಾರಿಯಿಂದ ಮಹಿಳಾ ಪ್ರಾತಿನಿಧ್ಯದ ಸಂಖ್ಯೆ ಹೆಚ್ಚಾಗಲಿದೆ. ಸಂಸತ್ ನಲ್ಲಿ ಮಹಿಳೆಯರ ಪಾತ್ರ ಬಲಗೊಳಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ" ಎಂದು ತಿಳಿಸಿದ್ದಾರೆ.
"ನಿರುದ್ಯೋಗ, ವಲಸೆ ಇತ್ಯಾದಿ ಸಮಸ್ಯೆಗಳನ್ನು ನಿವಾರಿಸಿ ಸದೃಢ ಭವಿಷ್ಯವನ್ನು ಯುವಜನತೆಗೆ ಒದಗಿಸುವ ಬದ್ದತೆಯನ್ನು ತಮ್ಮ ಸರ್ಕಾರ ಹೊಂದಿದೆ. ಚುನಾವಣೆಯ ಬಳಿಕ ಪಶ್ಚಿಮ ಬಂಗಾಳದಲ್ಲಿ ಆಡಳಿತ ಶುದ್ಧೀಕರಣದ ಹೊಸ ಪರ್ವ ಆರಂಭವಾಗಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.