ಚೆನ್ನೈ, ಏ. 06 (DaijiworldNews/AA): ತಮಿಳುನಾಡಿನ ಖ್ಯಾತ ಹಿರಿಯ ಐಎಎಸ್ ಅಧಿಕಾರಿ ಡಾ. ಜೆ. ರಾಧಾಕೃಷ್ಣನ್ ಅವರ ಪುತ್ರ ಡಾ. ಅರವಿಂದ್ ರಾಧಾಕೃಷ್ಣನ್ ಯುಪಿಎಸ್ಸಿ ಪರೀಕ್ಷೆಯಲ್ಲಿ 80ನೇ ರ್ಯಾಂಕ್ ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. ವೈದ್ಯಕೀಯ ವೃತ್ತಿಯ ನಡುವೆಯೂ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ತಮ್ಮ ಕನಸನ್ನು ನನಸಾಗಿಸಿಕೊಂಡ ಅವರ ಈ ಸಾಧನೆ ಅನೇಕರಿಗೆ ಸ್ಫೂರ್ತಿಯಾಗಿದೆ.

ರಾಮಚಂದ್ರ ವೈದ್ಯಕೀಯ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿರುವ ಅರವಿಂದ್ ಅವರ ಈ ಪಯಣ ಸುಲಭದ್ದಾಗಿರಲಿಲ್ಲ. 2020 ಮತ್ತು 2021ರ ಮೊದಲ ಎರಡು ಪ್ರಯತ್ನಗಳಲ್ಲಿ ಅವರು ಪ್ರಿಲಿಮಿನರಿ ಹಂತದಲ್ಲೇ ವಿಫಲರಾದರು. ಆದರೆ ದೃತಿಗೆಡದ ಅವರು, ಮೂರನೇ ಪ್ರಯತ್ನಕ್ಕೆ ಸಿದ್ಧತೆ ನಡೆಸುವಾಗಲೇ 'ನೀಟ್ ಪಿಜಿ' ಪರೀಕ್ಷೆಯಲ್ಲೂ ಉತ್ತೀರ್ಣರಾಗಿ ಚೆಟ್ಟಿನಾಡ್ ವೈದ್ಯಕೀಯ ಕಾಲೇಜಿನಲ್ಲಿ ಎಂಡಿ ಪ್ರವೇಶ ಪಡೆದಿದ್ದರು.
ಅರವಿಂದ್ ಅವರ ಅವರು ಆಸ್ಪತ್ರೆಯಲ್ಲಿ 36 ಗಂಟೆಗಳ ಸುದೀರ್ಘ ಶಿಫ್ಟ್ಗಳು ಮತ್ತು ತುರ್ತು ಕರ್ತವ್ಯಗಳ ನಡುವೆಯೂ ಓದುತ್ತಿದ್ದರು. ತಮ್ಮ ವೃತ್ತಿಪರ ಹಿನ್ನೆಲೆಯಾದ 'ಮೆಡಿಕಲ್ ಸೈನ್ಸ್' ಅನ್ನೇ ಐಚ್ಛಿಕ ವಿಷಯವನ್ನಾಗಿ ಆರಿಸಿಕೊಂಡಿದ್ದರು. ತಮ್ಮ ಮೂರನೇ ಪ್ರಯತ್ನದಲ್ಲಿ 361ನೇ ರ್ಯಾಂಕ್ ಪಡೆದಿದ್ದರೂ, ಐಎಎಸ್ ಸೇರುವ ಹಠದಿಂದ ಮತ್ತೊಮ್ಮೆ ಪರೀಕ್ಷೆ ಬರೆದು ನಾಲ್ಕನೇ ಬಾರಿ ಅಗ್ರ 100ರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. "ಒಂದು ವೈಫಲ್ಯದಿಂದ ಯಾರೂ ಪ್ರಯತ್ನ ನಿಲ್ಲಿಸಬಾರದು. ಬದಲಾಗಿ ತಪ್ಪುಗಳನ್ನು ವಿಶ್ಲೇಷಿಸಿ, ಮುಂದಿನ ಬಾರಿ ಉತ್ತಮ ಪ್ರದರ್ಶನ ನೀಡಬೇಕು" ಎಂದು ಅರವಿಂದ್ ತಮ್ಮ ಯಶಸ್ಸಿನ ಬಗ್ಗೆ ತಿಳಿಸಿದ್ದಾರೆ.