ಬೆಂಗಳೂರು, ಏ. 06 (DaijiworldNews/TA): ನಗರದಲ್ಲಿ ಎಲ್ಪಿಜಿ ಗ್ಯಾಸ್ ಕೊರತೆ ಹೋಟೆಲ್ ಉದ್ಯಮಕ್ಕಷ್ಟೇ ಸೀಮಿತವಾಗದೇ ಇದೀಗ ಆಟೋ ಚಾಲಕರ ಜೀವನೋಪಾಯಕ್ಕೂ ಗಂಭೀರ ಪರಿಣಾಮ ಬೀರುತ್ತಿದೆ. ಗ್ಯಾಸ್ ಭರ್ತಿಗೆ ಗಂಟೆಗಳ ಕಾಲ ಸಾಲಿನಲ್ಲಿ ನಿಂತು ಕಂಗೆಟ್ಟ ಚಾಲಕರು ಇಂದು ಆಹಾರ ಸಚಿವ ಕೆ. ಹೆಚ್. ಮುನಿಯಪ್ಪ ಅವರ ನಿವಾಸಕ್ಕೆ ಮುತ್ತಿಗೆ ಹಾಕಿ ತೀವ್ರ ಪ್ರತಿಭಟನೆ ನಡೆಸಿದರು.

ಹೆಬ್ಬಾಳದ ಸಂಜಯನಗರದಲ್ಲಿರುವ ಸಚಿವರ ಮನೆ ಎದುರು ಜಮಾಯಿಸಿದ ಆಟೋ ಚಾಲಕರು “ಗ್ಯಾಸ್ ಕೊಡಿಸಲೇಬೇಕು” ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಗರದ ಹಲವೆಡೆ ಆಟೋಗಳಿಗೆ ಅಗತ್ಯವಾದ ಎಲ್ಪಿಜಿ ಲಭ್ಯವಾಗದ ಕಾರಣ ದಿನಸಿ ಜೀವನ ನಡೆಸುವುದೇ ಕಷ್ಟವಾಗಿದೆ ಎಂದು ಅವರು ಅಳಲು ತೋಡಿಕೊಂಡರು.
ಪ್ರತಿಭಟನಾಕಾರರೊಂದಿಗೆ ಮಾತನಾಡಿದ ಸಚಿವ ಮುನಿಯಪ್ಪ, ಕೇಂದ್ರ ಸರ್ಕಾರದಿಂದ ಪ್ರತಿದಿನ ಸುಮಾರು 3 ಸಾವಿರ ಸಿಲಿಂಡರ್ಗಳು ಪೂರೈಕೆಯಾಗುತ್ತಿದ್ದು ಯಾವುದೇ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಆದರೆ ಖಾಸಗಿ ಗ್ಯಾಸ್ ಬಂಕ್ಗಳಲ್ಲಿ ಹೆಚ್ಚುವರಿ ದರ ವಸೂಲಿ ನಡೆಯುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಸಂಬಂಧಪಟ್ಟವರನ್ನು ಕರೆದು ಚರ್ಚೆ ನಡೆಸುವುದಾಗಿ ಭರವಸೆ ನೀಡಿದರು.
ಆಟೋ ಚಾಲಕರಿಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ ಸಚಿವರು, ಏಪ್ರಿಲ್ 10ರಂದು ಅಧಿಕಾರಿಗಳು ಹಾಗೂ ಪೊಲೀಸರೊಂದಿಗೆ ಸಭೆ ನಡೆಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದಾಗಿ ಹೇಳಿದರು. ಜೊತೆಗೆ, ಇದೇ ದಿನ ಮಧ್ಯಾಹ್ನವೂ ಅಧಿಕಾರಿಗಳೊಂದಿಗೆ ಚರ್ಚೆ ಮುಂದುವರಿಸಲಾಗುವುದು ಎಂದು ತಿಳಿಸಿದ್ದಾರೆ.
ಇದರ ನಡುವೆ ಪ್ರತಿಭಟನೆ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿ ಇಟ್ಟರು. ಸಮಸ್ಯೆ ಶೀಘ್ರ ಪರಿಹಾರವಾಗದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ವಿವಿಧ ಆಟೋ ಚಾಲಕರ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಇದೇ ವೇಳೆ, ಪೀಸ್ ಆಟೋ ಸಂಘಟನೆಯ ಅಧ್ಯಕ್ಷ ರಘು ಸರ್ಕಾರದ ವಿರುದ್ಧ ಕಿಡಿಕಾರಿದ್ದು, ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಸಚಿವರು ತೆರಳುವ ಎಲ್ಲೆಡೆ ಕಪ್ಪು ಬಾವುಟ ಪ್ರದರ್ಶನ ಮಾಡುವುದಾಗಿ ಹಾಗೂ ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಜನಪ್ರತಿನಿಧಿಗಳ ಮನೆಗಳಿಗೂ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದ್ದಾರೆ.