ದಾವಣಗೆರೆ, ಏ. 06 (DaijiworldNews/AK): ಈ ಉಪ ಚುನಾವಣೆಗಳು ಕಾಂಗ್ರೆಸ್ ಸರಕಾರ, ಮುಖ್ಯಮಂತ್ರಿಗಳಿಗೆ ಕಬ್ಬಿಣದ ಕಡಲೆ ಆಗಿ ಪರಿವರ್ತನೆ ಆಗಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.

ಇಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಗ್ಯಾರಂಟಿಯ ಮುಖವಾಡ ಧರಿಸಿ ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದ್ದರು. ಈ ಉಪ ಚುನಾವಣೆಗಳು ಕಾಂಗ್ರೆಸ್ ಸರಕಾರ, ಮುಖ್ಯಮಂತ್ರಿಗಳಿಗೆ ಕಬ್ಬಿಣದ ಕಡಲೆ ಆಗಿ ಪರಿವರ್ತನೆ ಆಗಿವೆ. ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ- ಇವೆರಡರ ಪೈಕಿ ಯಾವ ಕ್ಷೇತ್ರ ಉಳಿಸಿಕೊಳ್ಳಬೇಕೆಂದು ಮುಖ್ಯಮಂತ್ರಿಗಳು ಅವರ ಸಚಿವಸಂಪುಟದ ಸದಸ್ಯರು ಗಲಿಬಿಲಿಗೊಂಡಿದ್ದಾರೆ ಎಂದು ವಿಶ್ಲೇಷಿಸಿದರು.
ದಾವಣಗೆರೆಯಲ್ಲಿನ ಮತದಾರರ ಆಕ್ರೋಶವು ಮುಂದಿನ ದಿನಗಳಲ್ಲಿ ರಾಜಕೀಯ ಯಾವ ನಿಟ್ಟಿನಲ್ಲಿ ಸಾಗಲಿದೆ ಎಂಬುದನ್ನು ತೋರಿಸಿಕೊಡುತ್ತದೆ ಎಂದು ಪ್ರಶ್ನೆಗೆ ಉತ್ತರಿಸಿದರು. ಇದು ಬಿಜೆಪಿಗೆ ವರದಾನ ಆಗಲಿದೆ. ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರ ಬಗ್ಗೆ ಮೊಸಳೆಕಣ್ಣೀರು ಹಾಕುವುದು ಅಲ್ಪಸಂಖ್ಯಾತರಿಗೂ ಅರಿವಾಗಿದೆ ಎಂದು ತಿಳಿಸಿದರು.
17 ಬಜೆಟ್ ಮಂಡಿಸಿದ ಅನುಭವಿ ಮುಖ್ಯಮಂತ್ರಿಗಳಿದ್ದರೂ ಸಿದ್ದರಾಮಯ್ಯನವರ ಅನುಭವವನ್ನು ರಾಜ್ಯದ ಅಭಿವೃದ್ಧಿಗೆ ಬಳಸಲು ಸಾಧ್ಯವಾಗಿಲ್ಲ. ರಾಜ್ಯದಲ್ಲಿ ಉಪ ಚುನಾವಣೆ ನಾನಾ ಕಾರಣಕ್ಕೆ ಸುದ್ದಿ ಮಾಡಿದೆ. ಮುಖ್ಯಮಂತ್ರಿಗಳ ನಿದ್ದೆಗೆಡಿಸುವ ಕೆಲಸವನ್ನೂ ಈ ಚುನಾವಣೆಗಳು ಮಾಡಿವೆ ಎಂದು ಹೇಳಿದರು.
ಕಾಂಗ್ರೆಸ್ ಸರಕಾರ ಕಳೆದ 3 ವರ್ಷಗಳಲ್ಲಿ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದೇ ಇದ್ದರೂ ತನ್ನ ಗ್ಯಾರಂಟಿಗಳೇ ಅಭಿವೃದ್ಧಿ ಎಂದು ಬಿಂಬಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತ ಬಂದಿದೆ ಎಂದು ಆಕ್ಷೇಪಿಸಿದರು.
ಮುಖ್ಯಮಂತ್ರಿ, ಸಚಿವಸಂಪುಟದ ಸದಸ್ಯರು ತಮ್ಮ ವೈಫಲ್ಯವನ್ನು ಮುಚ್ಚಿ ಹಾಕಲು ಕೇಂದ್ರ ಸರಕಾರದ ಮೇಲೆ ಆರೋಪ ಮಾಡುತ್ತ ಬಂದಿದ್ದಾರೆಯೇ ವಿನಾ, ರಾಜ್ಯವು ಅಭಿವೃದ್ಧಿ ಶೂನ್ಯವಾಗಿದೆ ಎಂದು ಟೀಕಿಸಿದರು. ಅಹಿಂದ ಹೆಸರು ಹೇಳಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿಗಳು ಹಿಂದುಳಿದ ಸಮುದಾಯಗಳನ್ನು ಯಾವತ್ತೋ ಮರೆತಿದ್ದಾರೆ. ಇವತ್ತು ಅಲ್ಪಸಂಖ್ಯಾತರನ್ನು ಮರೆತಿರುವ ಕುರಿತು ಚರ್ಚೆ ಆಗುತ್ತಿದೆ ಎಂದರು.