ಮೈಸೂರು, ಏ. 07 (DaijiworldNews/TA): ಮುಡಾ ಹಗರಣ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬಕ್ಕೆ ಮತ್ತೊಮ್ಮೆ ಕಾನೂನು ಸಂಕಷ್ಟ ಎದುರಾಗುತ್ತಿದೆ. ಈ ಪ್ರಕರಣದಲ್ಲಿ ಲೋಕಾಯುಕ್ತ ಸಲ್ಲಿಸಿದ್ದ ಬಿ ರಿಪೋರ್ಟ್ ವಿರುದ್ಧ ಜಾರಿ ನಿರ್ದೇಶನಾಲಯ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

ಇಡಿ ತನ್ನ ಅರ್ಜಿಯಲ್ಲಿ, ಸಿಎಂ ಹಾಗೂ ಅವರ ಕುಟುಂಬ ಸದಸ್ಯರ ಮೇಲಿನ ಆರೋಪಗಳಿಗೆ ಸಾಕಷ್ಟು ಸಾಕ್ಷ್ಯಗಳಿವೆ ಎಂದು ಸ್ಪಷ್ಟಪಡಿಸಿದೆ. ಕೆಳ ನ್ಯಾಯಾಲಯದ ಬಿ ರಿಪೋರ್ಟ್ ಆದೇಶವನ್ನು ಪ್ರಶ್ನಿಸಿ, ಪ್ರಕರಣದ ಮರು ತನಿಖೆಗೆ ಮನವಿ ಮಾಡಲಾಗಿದೆ. ಈ ಕುರಿತು ಪ್ರಕರಣದ ಮೂಲ ದೂರುದಾರರಾದ ಸ್ನೇಹಮಯಿ ಕೃಷ್ಣ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಸಿಎಂ ಕುಟುಂಬಕ್ಕೆ ಈಗಾಗಲೇ ತಾತ್ಕಾಲಿಕ ರಿಲೀಫ್ ಮಾತ್ರ ಸಿಕ್ಕಿದೆ ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಕಾನೂನು ಕ್ರಮ ಗಂಭೀರವಾಗುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇನ್ನೂ ಅವರು, ಆರೋಪಿಗಳಿಗೆ ವಿರುದ್ಧ ಸಾಕಷ್ಟು ದಾಖಲೆಗಳು ತಮ್ಮ ಬಳಿಯೂ ಇರುವುದಾಗಿ ಹೇಳಿ, ಬಿ ರಿಪೋರ್ಟ್ ಸಲ್ಲಿಸಿದ ಲೋಕಾಯುಕ್ತ ಅಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ, ಇಡಿ ತನಿಖೆಯಲ್ಲಿ ನಾಲ್ವರು ಆರೋಪಿಗಳ ಪಾತ್ರಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಬೆಳಕಿಗೆ ಬಂದಿದ್ದು, ಹಗರಣ ನಡೆದಿದೆ ಎಂಬುದಕ್ಕೆ ಸಾಕ್ಷ್ಯಾಧಾರಗಳಿವೆ ಎಂದು ಸಂಸ್ಥೆ ಹೇಳಿದೆ. ಈ ಹಿನ್ನೆಲೆ, ಹೈಕೋರ್ಟ್ ಮುಂದೆ ಪ್ರಕರಣದ ಮರು ಪರಿಶೀಲನೆ ನಡೆಯುವ ಸಾಧ್ಯತೆ ಇದೆ. ಮುಡಾ ಹಗರಣ ಪ್ರಕರಣವು ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ಕಾನೂನು ಬೆಳವಣಿಗೆಗಳ ಮೇಲೆ ಎಲ್ಲರ ಗಮನ ಕೇಂದ್ರೀಕರಿಸಿದೆ.