ಕೇರಳ, ಏ. 07 (DaijiworldNews/TA): ಭಾರತದ ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಇತ್ತೀಚೆಗೆ ಕೇರಳದ ಕಣ್ಣೂರು ಜಿಲ್ಲೆಯ ತಳಿಪರಂಬದಲ್ಲಿರುವ ಐತಿಹಾಸಿಕ ರಾಜರಾಜೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಏಪ್ರಿಲ್ 2ರಂದು ನಡೆದ ಈ ಭೇಟಿಯ ವೇಳೆ ದೇವಸ್ಥಾನದಲ್ಲಿ ಭಕ್ತರು ಮತ್ತು ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಸಂಜೆ ವೇಳೆಯಲ್ಲಿ ಅನಂತ್ ಅಂಬಾನಿಯವರ ದರ್ಶನ ಪಡೆದರು. ದೇವಾಲಯದಲ್ಲಿ ಅವರು ಪೊನ್ನುಂಕುಡಂ, ಪಟ್ಟಂ, ಥಾಲಿ, ನೆಯ್ಯಾಮೃತು ಸೇರಿದಂತೆ ವಿವಿಧ ಸೇವೆಗಳನ್ನು ಅರ್ಪಿಸಿ ಅಶ್ವಮೇಧ ನಮಸ್ಕಾರ ನೆರವೇರಿಸಿದರು.
ಇದೇ ವೇಳೆ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ 3 ಕೋಟಿ ರೂಪಾಯಿ ಮೊತ್ತದ ಚೆಕ್ ಅನ್ನು ನೀಡಿದ ಅನಂತ್ ಅಂಬಾನಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಸಹಾಯ ಮಾಡುವುದಾಗಿ ಭರವಸೆ ನೀಡಿದರು. ಒಟ್ಟಾರೆ ದೇವಸ್ಥಾನದ ಅಭಿವೃದ್ಧಿಗೆ ಸುಮಾರು 12 ಕೋಟಿ ರೂಪಾಯಿ ಕೊಡುಗೆ ನೀಡಲು ಅವರು ಮುಂದಾಗಿದ್ದಾರೆ.
ವಿಶೇಷವಾಗಿ ದೇವಸ್ಥಾನದ ಪೂರ್ವಭಾಗದಲ್ಲಿರುವ ಪುರಾತನ ಗೋಪುರವು ಶತಮಾನಗಳ ಹಳೆಯದು ಎಂದು ನಂಬಲಾಗಿದ್ದು, ಅದು ದುರಸ್ಥಿಯಾಗದೇ ದೀರ್ಘಕಾಲದಿಂದ ಉಳಿದಿದೆ. ಈ ಗೋಪುರ ಪುನಃಸ್ಥಾಪನೆಗೆ ಅನಂತ್ ಅಂಬಾನಿ ಹಣಕಾಸು ನೆರವು ನೀಡಲು ಮುಂದಾಗಿರುವುದು ಮಹತ್ವದ್ದಾಗಿದೆ.
ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಈ ಅನುದಾನ ನೆರವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ. ಅನಂತ್ ಅಂಬಾನಿ ದೇವಸ್ಥಾನಕ್ಕೆ ಆಗಮಿಸಿದ ವೇಳೆ ಅವರನ್ನು ದೇವಸ್ಥಾನದ ಅಧಿಕಾರಿಗಳು ಹಾಗೂ ಅರ್ಚಕರು ಸಾಂಪ್ರದಾಯಿಕವಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ದೇವಸ್ವಮ್ ಅಧ್ಯಕ್ಷ ಟಿ.ಪಿ. ವಿನೋದ್ ಕುಮಾರ್, ಕಾರ್ಯನಿರ್ವಾಹಕ ಅಧಿಕಾರಿ ಕೆ.ಪಿ. ವಿನಯನ್, ಮುಖ್ಯ ಅರ್ಚಕ ಇ.ಪಿ. ಕುಬೇರನ್ ನಂಬೂದಿರಿ ಹಾಗೂ ಇತರ ಟ್ರಸ್ಟಿಗಳು ಉಪಸ್ಥಿತರಿದ್ದರು. ಈ ದಾನ ಕಾರ್ಯಕ್ಕೆ ಭಕ್ತರು ಹಾಗೂ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.