ಶ್ರೀನಗರ, ಏ. 07 (DaijiworldNews/AA): ಅಂತರರಾಜ್ಯ ಲಷ್ಕರ್-ಎ-ತೈಬಾ ಭಯೋತ್ಪಾದಕ ಘಟಕದ ಅಬ್ದುಲ್ಲಾ ಅಲಿಯಾಸ್ ಅಬು ಹುರೇರಾ ಸೇರಿದಂತೆ 5 ಜನರನ್ನು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಇಂದು ಬಂಧಿಸಿದ್ದಾರೆ.

ಎಲ್ಇಟಿಯ ಪ್ರಮುಖ ಭಯೋತ್ಪಾದಕ ಅಬ್ದುಲ್ಲಾ ಅಲಿಯಾಸ್ ಅಬು ಹುರೇರಾ ಸುಮಾರು 16 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಕೇಂದ್ರಾಡಳಿತ ಪ್ರದೇಶದ ಹೊರಗೆ ನೆಲೆಗಳನ್ನು ಸ್ಥಾಪಿಸಲು ಕಾರಣನಾಗಿದ್ದ. ಈತ ಭಯೋತ್ಪಾದಕ ಅಡಗುತಾಣಗಳು ಮತ್ತು ಹಣಕಾಸು ಮಾರ್ಗಗಳ ಜಾಲದ ಹಿಂದಿನ ಮಾಸ್ಟರ್ ಮೈಂಡ್ ಆಗಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅಬ್ದುಲ್ಲಾ ಜೊತೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಪೊಲೀಸರು ಮತ್ತು ಕೇಂದ್ರೀಯ ತನಿಖಾ ಸಂಸ್ಥೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮತ್ತೊಬ್ಬ ಪಾಕಿಸ್ತಾನಿ ಭಯೋತ್ಪಾದಕ ಉಸ್ಮಾನ್ ಅಲಿಯಾಸ್ ಖುಬೈಬ್ ಎಂಬಾತನನ್ನು ಬಂಧಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರ, ರಾಜಸ್ಥಾನ, ಹರಿಯಾಣ ಸೇರಿದಂತೆ 19 ಸ್ಥಳಗಳಲ್ಲಿ ಪೊಲೀಸರು ಶೋಧ ನಡೆಸಿದ್ದರು. ಈ ವೇಳೆ ಭಯೋತ್ಪಾದಕರಿಗೆ ಲಾಜಿಸ್ಟಿಕ್ಸ್ ಮತ್ತು ಆರ್ಥಿಕ ಬೆಂಬಲವನ್ನು ಒದಗಿಸುವಲ್ಲಿ ಭಾಗಿಯಾಗಿರುವ ಎಲ್ಇಟಿ ಜಾಲವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.