ವಿಶಾಖಪಟ್ಟಣಂ, ಏ. 07 (DaijiworldNews/AA): ಎರಡು ಸ್ಥಳೀಯ ತಂಡಗಳ ನಡುವಿನ ಕ್ರಿಕೆಟ್ ಪಂದ್ಯದ ಸಂದರ್ಭದಲ್ಲಿ ಕೇವಲ ಒಂದು ರನ್ಗಾಗಿ ಆಟಗಾರರ ನಡುವೆ ನಡೆದ ವಿವಾದವು ಯುವಕನೊಬ್ಬ ಕೊಲೆಯಲ್ಲಿ ಅಂತ್ಯವಾದ ಘಟನೆ ವಿಶಾಖಪಟ್ಟಣಂ ನಲ್ಲಿ ನಡೆದಿದೆ.

ವಿಶಾಖಪಟ್ಟಣಂನಲ್ಲಿ ಖಾಸಗಿ ಜಮೀನೊಂದರ ಬಳಿ ಭಾನುವಾರ ನಡೆದ ಪಂದ್ಯದ ಸಮಯದಲ್ಲಿ ಒಂದು ರನ್ಗೆ ಸಂಬಂಧಿಸಿದಂತೆ ಆಟಗಾರರ ನಡುವೆ ವಾಗ್ವಾದ ನಡೆದಿದೆ. ಆದರೆ, ಪಂದ್ಯದ ಅಂಪೈರ್ ಚಿರಂಜೀವಿ ಮಧ್ಯಪ್ರವೇಶಿಸಿದಾಗ ಅದು ಆರಂಭದಲ್ಲಿ ಇತ್ಯರ್ಥವಾಯಿತು. ಆದರೆ ಸಂಜೆ, ಆರೋಪಿ ಕೆ. ಕಿಶೋರ್ (26) ಅಂಪೈರ್ ಸಹೋದರ ಅಜಿತ್ (23) ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾನೆ. ಅದೇ ವಿಷಯಕ್ಕೆ ಸಂಬಂಧಿಸಿದಂತೆ ಮತ್ತೊಂದು ವಾಗ್ವಾದ ನಡೆದ ನಂತರ ಅವರ ಎದೆಗೆ ಚಾಕುವಿನಿಂದ ಇರಿದಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಂಗಳವಾರ ಮಾಹಿತಿ ನೀಡಿದ್ದಾರೆ.
ಅಜಿತ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅವರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ವಿವಾದಿತ ರನ್ ಬಗ್ಗೆ ಖಾಸಗಿ ಛಾಯಾಗ್ರಾಹಕರಾಗಿರುವ ಆರೋಪಿ ಕಿಶೋರ್ ಅಂಪೈರ್ ಜೊತೆ ವಾಗ್ವಾದ ನಡೆಸಿದ್ದರು. ಆದರೆ, ಆ ದಿನದ ನಂತರ ಎರಡೂ ಕಡೆಯವರು ಮತ್ತೆ ಮುಖಾಮುಖಿಯಾದಾಗ, ವಾಗ್ವಾದ ವಿಕೋಪಕ್ಕೆ ತಿರುಗಿ ಮಾರಣಾಂತಿಕ ಹಲ್ಲೆಗೆ ಕಾರಣವಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.