ನವದೆಹಲಿ,,ಏ. 07 (DaijiworldNews/AK): ಕದನವಿರಾಮಕ್ಕೆ ಇರಾನ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದ 10 ದಿನಗಳ ಗಡುವು ನಾಳೆ ಬೆಳಗ್ಗೆ ಅಂತ್ಯಗೊಳ್ಳಲಿದೆ. ಹೀಗಾಗಿ, ಟೆಹ್ರಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಇಂದು ಸಂಜೆ ತುರ್ತು ಸಲಹೆಯನ್ನು ನೀಡಿದ್ದು, ಸಂಭಾವ್ಯ ಉದ್ವಿಗ್ನ ಪರಿಸ್ಥಿತಿಯ ನಡುವೆ ಇರಾನ್ ದೇಶದಲ್ಲಿರುವ ಭಾರತೀಯ ಪ್ರಜೆಗಳು ಸುರಕ್ಷತೆಗೆ ಆದ್ಯತೆ ನೀಡುವಂತೆ ಒತ್ತಾಯಿಸಿದೆ.

ಭಾರತೀಯ ಪ್ರಜೆಗಳು ಕನಿಷ್ಠ 48 ಗಂಟೆಗಳ ಕಾಲ ತಾವು ಎಲ್ಲಿದ್ದಾರೋ ಅದೇ ಸ್ಥಳಗಳಲ್ಲಿಯೇ ಇರಬೇಕೆಂದು ಸೂಚಿಸಲಾಗಿದೆ. ಹಾಗೇ ಅನಗತ್ಯ ಓಡಾಟ ಮಾಡದೆ ಮನೆಯೊಳಗೆ ಇರಬೇಕೆಂದು ಸೂಚಿಸಿದೆ.
ನಾಳೆ ಸಂಭವಿಸಬಹುದಾದ ದಾಳಿಯ ವಿರುದ್ಧ ಮುನ್ನೆಚ್ಚರಿಕೆಯಾಗಿ ಬಹುಮಹಡಿ ಕಟ್ಟಡಗಳ ಮೇಲಿನ ಮಹಡಿಗಳಲ್ಲಿ ಇರದಂತೆ ಭಾರತೀಯರಿಗೆ ಸೂಚಿಸಲಾಗಿದೆ. ಹಾಗೇ, ಭಾರತೀಯ ರಾಯಭಾರ ಕಚೇರಿಯೊಂದಿಗೆ ನಿಕಟ ಸಮನ್ವಯವನ್ನು ಕಾಪಾಡಿಕೊಳ್ಳಲು ಸೂಚಿಸಲಾಗಿದೆ. ರಾಯಭಾರ ಕಚೇರಿಯಿಂದ ವ್ಯವಸ್ಥೆ ಮಾಡಲಾದ ಹೋಟೆಲ್ಗಳಲ್ಲಿ ವಸತಿ ಹೊಂದಿರುವವರು ಒಳಗೆಯೇ ಇರಲು ಮತ್ತು ಸ್ಥಳದಲ್ಲೇ ಇರುವ ರಾಯಭಾರ ಕಚೇರಿಯ ಸಿಬ್ಬಂದಿಯೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿರಲು ನಿರ್ದೇಶಿಸಲಾಗಿದೆ.
ರಾಯಭಾರ ಕಚೇರಿಯ ತುರ್ತು ಸಂಖ್ಯೆಗಳು (989128109115, 989128109102, 989128109109, 989932179359) ಕಾರ್ಯನಿರ್ವಹಿಸುತ್ತಲೇ ಇರುತ್ತವೆ” ಎಂದು ಭಾರತದ ರಾಯಭಾರ ಕಚೇರಿ ಹೇಳಿದೆ.