ಉತ್ತರಪ್ರದೇಶ, ಏ. 08 (DaijiworldNews/TA): ನಮ್ಮ ದೇಶದ ಅತ್ಯಂತ ಕಠಿಣ ಪರೀಕ್ಷೆಯಾದ ಇದರಲ್ಲಿ ಈಗಾಗಲೇ ಯಶಸ್ಸು ಕಂಡವರು ಅನೇಕರಿಗೆ ಸ್ಪೂರ್ತಿ. ಅಂತವರ ಸಾಲಿನಲ್ಲಿ ಐಎಎಸ್ ಅಧಿಕಾರಿ ಅರ್ಪಿತ್ ಗುಪ್ತಾ ಕೂಡ ನಿಲ್ಲುತ್ತಾರೆ. ಅವರ ಸಾಧನೆಯ ಕಥೆಯನ್ನು ತಿಳಿಯೋಣ ಬನ್ನಿ.

ಪ್ರತಿ ವರ್ಷ ಲಕ್ಷಾಂತರ ಅಭ್ಯರ್ಥಿಗಳು ಐಎಎಸ್ ಅಧಿಕಾರಿಯಾಗುವ ಕನಸು ಕಾಣುತ್ತಾರೆ. ಇದಕ್ಕಾಗಿ ಅವರು ತಮ್ಮ ಎಲ್ಲಾ ಹವ್ಯಾಸಗಳು ಹಾಗೂ ಸೋಷಿಯಲ್ ಮೀಡಿಯಾಗಳಿಂದ ದೂರವಿದ್ದು ತಯಾರಿ ನಡೆಸುತ್ತಾರೆ. ಇಷ್ಟೆಲ್ಲ ಮಾಡಿದರೂ UPSC ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಎಲ್ಲರಿಗೂ ಸಾಧ್ಯವಾಗುತ್ತಿಲ್ಲ. ಆದರೆ ಉತ್ತರಪ್ರದೇಶದ ಗೋರಖ್ ಪುರದ ಅರ್ಪಿತ್ ಗುಪ್ತಾ ಕೂಡ ಐಎಎಸ್ ಅಧಿಕಾರಿಯಾಗುವ ಪಯಣದಲ್ಲಿ ಹಲವು ಸಂಕಷ್ಟಗಳನ್ನು ಎದುರಿಸಿದರು.
ಐಎಎಸ್ ಅರ್ಪಿತ್ ಗುಪ್ತಾ ಉತ್ತರ ಪ್ರದೇಶದ ಗೋರಖ್ಪುರ ನಿವಾಸಿ. 24 ನೇ ವಯಸ್ಸಿನಲ್ಲಿ, ಅವರು ತಮ್ಮ ಎರಡನೇ ಪ್ರಯತ್ನದಲ್ಲಿ UPSC ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಐಎಎಸ್ ಅರ್ಪಿತ್ ಗುಪ್ತಾ ಅವರು ಗೋರಖ್ ಪುರದ ಜಿಎನ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಿಂದ ಹೈಸ್ಕೂಲ್ ಮತ್ತು ಇಂಟರ್ಮೀಡಿಯೇಟ್ ಬೋರ್ಡ್ ಪರೀಕ್ಷೆಗಳನ್ನು ಪೂರ್ಣಗೊಳಿಸಿದ್ದಾರೆ. ನಂತರ ಅವರು ಐಐಟಿ ರೂರ್ಕಿಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ನಲ್ಲಿ ಪದವಿ ಪಡೆದರು. ಪದವಿ ಪಡೆದ ತಕ್ಷಣ, ಅವರು ಹಣಕಾಸು ಮಾರುಕಟ್ಟೆ ವಿಶ್ಲೇಷಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆದರೆ, 3 ತಿಂಗಳ ನಂತರ ಕೆಲಸ ಬಿಟ್ಟು UPSC ಪರೀಕ್ಷೆಗೆ ತಯಾರಿ ಆರಂಭಿಸಿದರು.
UPSC ಪರೀಕ್ಷೆಯ ಎರಡನೇ ಪ್ರಯತ್ನದಲ್ಲಿ ಅರ್ಪಿತ್ ಗುಪ್ತಾ ಯಶಸ್ವಿಯಾಗಿದ್ದಾರೆ. ಅವರ ಮೊದಲ ಪ್ರಯತ್ನದಲ್ಲಿ ಕೇವಲ 1 ಅಂಕದಿಂದ ವಂಚಿತರಾದರು. ಇದರಿಂದಾಗಿ ಅವರು ತೀವ್ರ ನಿರಾಶೆಗೊಂಡರು. ಬಿಡದೆ ಮುಂದಿನ ಪ್ರಯತ್ನಕ್ಕೆ ತಯಾರಿ ನಡೆಸಿದ್ದರು. ಎರಡನೇ ಪ್ರಯತ್ನದಲ್ಲಿ ಅವರು ತಮ್ಮ ಸೋದರ ಸಂಬಂಧಿಯನ್ನು ಕಳೆದುಕೊಂಡಿದ್ದರು. ಆ ನೋವಿನ ಮಧ್ಯೆಯೂ 2021 ರ UPSC ಪರೀಕ್ಷೆಯಲ್ಲಿ 54 ನೇ ರ್ಯಾಂಕ್ ಗಳಿಸುವ ಮೂಲಕ IAS ಅಧಿಕಾರಿಯಾದರು.