ಚಿಕ್ಕಮಗಳೂರು, ಏ. 08 (DaijiworldNews/TA): ಕೊಡಗಿನಲ್ಲಿ ಚಾರಣಕ್ಕೆ ತೆರಳಿದ್ದ ಶರಣ್ಯ ನಾಪತ್ತೆಯಾಗಿ ಸುರಕ್ಷಿತವಾಗಿ ವಾಪಸಾದ ಪ್ರಕರಣದ ಬೆನ್ನಲ್ಲೇ ಇದೀಗ ಮತ್ತೊಂದು ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. ಚಿಕ್ಕಮಗಳೂರು ಜಿಲ್ಲೆಯ ಚಂದ್ರದ್ರೋಣ ಪರ್ವತ ಸರಣಿಯಲ್ಲಿ ಪ್ರವಾಸಕ್ಕೆ ಬಂದಿದ್ದ ಅಪ್ರಾಪ್ತ ಬಾಲಕಿ ನಾಪತ್ತೆಯಾಗಿದ್ದಾಳೆ.

ಕೇರಳದ ಪಾಲಕ್ಕಾಡ್ ಮೂಲದ 14 ವರ್ಷದ ಶ್ರೀನಂದಾ ಎಂಬ ಬಾಲಕಿ, ಪೋಷಕರೊಂದಿಗೆ ಸುಮಾರು 40 ಜನರ ತಂಡದೊಂದಿಗೆ ಪ್ರವಾಸಕ್ಕೆ ಬಂದಿದ್ದಳು. ಈ ವೇಳೆ ಚಂದ್ರದ್ರೋಣ ಪರ್ವತ ಸರಣಿಯ ಮಾಣಿಕ್ಯಧಾರಾ ಸಮೀಪದಲ್ಲಿ ನಿನ್ನೆ ಸಂಜೆ ಸುಮಾರು 6 ಗಂಟೆ ಸುಮಾರಿಗೆ ಆಕೆ ಕಾಣೆಯಾಗಿರುವುದು ತಿಳಿದುಬಂದಿದೆ. ಬಾಲಕಿ ಕಾಣೆಯಾಗುತ್ತಿದ್ದಂತೆಯೇ ಸ್ಥಳೀಯರು ಮತ್ತು ಇತರ ಪ್ರವಾಸಿಗರು ತಕ್ಷಣ ಹುಡುಕಾಟ ಆರಂಭಿಸಿದರೂ ಯಾವುದೇ ಸುಳಿವು ಸಿಗಲಿಲ್ಲ.
ಘಟನೆಯ ಮಾಹಿತಿ ದೊರಕುತ್ತಿದ್ದಂತೆಯೇ ಅಗ್ನಿಶಾಮಕ ದಳ, ಅರಣ್ಯ ಇಲಾಖೆ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳಕ್ಕಾಗಮಿಸಿ ಸಂಯುಕ್ತವಾಗಿ ಶೋಧ ಕಾರ್ಯಾಚರಣೆ ನಡೆಸಿದರು. ರಾತ್ರಿ ಪೂರ್ತಿಯೂ ಹುಡುಕಾಟ ಮುಂದುವರಿದಿದ್ದು, ಇಂದೂ ಡ್ರೋನ್ ಸಹಾಯದಿಂದ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ. ಈ ಪ್ರದೇಶವು ಹುಲ್ಲುಗಾವಲು ಹಾಗೂ ಇಳಿಜಾರು ಪ್ರದೇಶಗಳಿಂದ ಕೂಡಿರುವುದರಿಂದ ಕಾರ್ಯಾಚರಣೆ ಸವಾಲಿನದ್ದಾಗಿದೆ. ಘಟನೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಾಲಕಿ ನಾಪತ್ತೆಯಾಗಿರುವ ಹಿನ್ನೆಲೆ ಹಲವು ಅನುಮಾನಗಳು ವ್ಯಕ್ತವಾಗುತ್ತಿದ್ದು, ಅಧಿಕಾರಿಗಳು ಎಲ್ಲಾ ಕೋಣಗಳಿಂದ ತನಿಖೆ ನಡೆಸುತ್ತಿದ್ದಾರೆ.