ಬೆಂಗಳೂರು, ಏ. 08 (DaijiworldNews/AK):ಕರ್ನಾಟಕದಲ್ಲಿ ಉಪಚುನಾವಣೆ ಕದನ ಕೊನೆ ಹಂತಕ್ಕೆ ತಲುಪಿದೆ. ನಾಳೆ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಎರಡು ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

ಬಿಜೆಪಿ, ಕಾಂಗ್ರೆಸ್ ಜಿದ್ದಾಜಿದ್ದಿಗೆ ಸಾಕ್ಷಿಯಾಗಿರುವ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ 2 ಕ್ಷೇತ್ರಗಳ ಉಪಚುನಾವಣೆ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಂಗಳವಾರ ಸಂಜೆ 5.30ಕ್ಕೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿತ್ತು. ಕಳೆದೊಂದು ವಾರದಿಂದ ಕ್ಷೇತ್ರದಲ್ಲೇ ಬೀಡುಬಿಟ್ಟು ಬಿರುಸಿನ ಪ್ರಚಾರ ನಡೆಸಿದ್ದ ನಾಯಕರು ಕ್ಷೇತ್ರಬಿಟ್ಟು ವಾಪಸ್ ತೆರಳಿದ್ದಾರೆ.
ಇಂದು ಅಭ್ಯರ್ಥಿಗಳು ಮನೆಮನೆ ಪ್ರಚಾರ ನಡೆಸಲಿದ್ದು, ನಾಳೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6ಗಂಟೆಯವರೆೆಗೆ ಮತದಾನ ನಡೆಯಲಿದೆ. ನವನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಸ್ಟರಿಂಗ್ ಕಾರ್ಯ ನಡೆಯಿತು.
ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,59,797 ಮತದಾರರಿದ್ದು, ಅವರಲ್ಲಿ ಪುರುಷರು 1,26,999, ಮಹಿಳೆಯರು-1,32,775, ಇತರರು-23 ಮತ್ತು ಅಂಚೆ ಮತದಾರರು-170. ಒಟ್ಟು 09 ಅಭ್ಯರ್ಥಿಗಳು ಕಣದಲ್ಲಿದಿದ್ದಾರೆ. ಒಟ್ಟು 332 ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದೆ. 1,564 ಚುನಾವಣಾ ಸಿಬ್ಬಂದಿ ನಿಯೋಜಿಸಲಾಗಿದ್ದು, ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. 80 ವರ್ಷ ಮೇಲ್ಪಟ್ಟವರಿಗೆ ಮನೆಯಲ್ಲೇ ಮತದಾನಕ್ಕೆ ವ್ಯವಸ್ಥೆ ಕಲ್ಪಿಸಿದ್ದು, ಮತಗಟ್ಟೆಗಳ ಬಳಿ ವ್ಹೀಲ್ ಚೇರ್ ವ್ಯವಸ್ಥೆಯನ್ನು ಮಾಡಲಾಗಿದೆ. ಯುವ ಮತದಾನ ಕೇಂದ್ರ ಮತ್ತು ಮಹಿಳೆಯರಿಗಾಗಿ ಎರಡು ಸಖಿ ಮತಗಟ್ಟೆಗಳನ್ನು ತೆರೆಯಲಾಗಿದ್ದು ಗಮನ ಸೆಳೆಯುತ್ತಿವೆ.
ಇತ್ತ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲೂ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ದಾವಣಗೆರೆಯಲ್ಲಿ ಮುಕ್ತ ಮತ್ತು ಶಾಂತಿಯುತ ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪಿಬಿ ರಸ್ತೆಯ ಬಳಿ ಇರುವ ಡಿಆರ್ಆರ್ ಸ್ಕೂಲ್ನಲ್ಲಿ ಬೆಳಗ್ಗೆಯಿಂದಲೇ ಮಸ್ಟರಿಂಗ್ ಕಾರ್ಯ ನಡೆಯಿತು. ಸಿಬ್ಬಂದಿ ತಮ್ಮ ಕೇಂದ್ರದ ಮತಯಂತ್ರವನ್ನ ಪಡೆದುಕೊಂಡು ಮತಗಟ್ಟೆಯತ್ತ ತೆರಳಿದ್ದಾರೆ. ಚುನಾವಣಾ ಕರ್ತವ್ಯಕ್ಕೆ ತೆರಳುವ ಸಿಬ್ಬಂದಿಗೆ ವೈದ್ಯಕೀಯ ಪರೀಕ್ಷೆ ಕೂಡ ಮಾಡಲಾಗಿದೆ.
ದಾವಣಗೆರೆ ದಕ್ಷಿಣದಲ್ಲಿ ಒಟ್ಟು 284 ಮತಗಟ್ಟೆಗಳ ನಿರ್ಮಾಣ ಮಾಡಲಾಗಿದ್ದು, ಇದರಲ್ಲಿ 76 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. 1,489 ಚುನಾವಣಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಮತಗಟ್ಟೆಯ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಮಾಡಲಾಗಿದೆ. ಎಲ್ಲ ಮತಗಟ್ಟೆಯಲ್ಲಿ ವೆಬ್ಕಾಸ್ಟಿಂಗ್ ವ್ಯವಸ್ಥೆ ಇದೆ. ಇನ್ನು ಒಟ್ಟು 2,31072 ಮತದಾರರಿದ್ದು, ಮಹಿಳಾ ಮತದಾರರೇ ಹೆಚ್ಚಿದ್ದಾರೆ. ಕಣದಲ್ಲಿ 25 ಅಭ್ಯರ್ಥಿಗಳಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿಭದ್ರತೆ ಕೈಗೊಳ್ಳಲಾಗಿದೆ. ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆ ನಿಯೋಜಿಸಲಾಗಿದೆ.