ಕಲಬುರಗಿ, ಏ. 09 (DaijiworldNews/AA): ವಾಹನ ತೆರಿಗೆ ಕಡಿಮೆ ಆಗುತ್ತದೆ ಎಂದು ಪುದುಚೇರಿಯಲ್ಲಿ ನೋಂದಣಿ ಮಾಡಿದ ವಾಹನ ಮಾಲೀಕರಿಗೆ ಸಾರಿಗೆ ಇಲಾಖೆ ಅಧಿಕಾರಿಗಳು ಕಳೆದೊಂದು ವರ್ಷದಲ್ಲಿ ಜಿಲ್ಲೆಯಲ್ಲಿ 1.98 ಕೋಟಿ ರೂ. ತೆರಿಗೆ ಹಾಗೂ ದಂಡ ಸಂಗ್ರಹ ಮಾಡಿದ್ದಾರೆ.

ಪುದುಚೇರಿಗೆ ಹೋಲಿಸಿದರೆ ಕರ್ನಾಟಕದಲ್ಲಿ ನಾಲ್ಕು ಚಕ್ರ ವಾಹನಗಳ ರಸ್ತೆ ತೆರಿಗೆ ಹೆಚ್ಚಿರುವ ಹಿನ್ನೆಲೆಯಲ್ಲಿ ಹಲವರು ತಮ್ಮ ವಾಹನಗಳನ್ನು ಅಲ್ಲಿ ನೋಂದಣಿ ಮಾಡಿಸುತ್ತಿದ್ದು, ಇದರಿಂದ ರಾಜ್ಯ ತೆರಿಗೆ ಸಂಗ್ರಹಕ್ಕೆ ಕತ್ತರಿ ಹಾಕುತ್ತಿದ್ದಾರೆ. ಈ ರೀತಿಯಾಗಿ ಪುದುಚೆರಿಯಲ್ಲಿ ವಾಹನಗಳನ್ನು ನೋಂದಣಿ ಮಾಡಿಸುತ್ತಿರುವುದು ಸಾರಿಗೆ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದಿದೆ.
ಕಲಬುರಗಿಯಲ್ಲಿ ಅಂತಹ 92 ವಾಹನಗಳ ಮಾಲೀಕರ ವಿರುದ್ಧ ಕಳೆದ ವರ್ಷ ಪ್ರಕರಣ ದಾಖಲಿಸಿ, ಒಟ್ಟು 1.98ಕೋಟಿ ರೂ. ದಂಡ ಮತ್ತು ತೆರಿಗೆಯನ್ನು ಅಧಿಕಾರಿಗಳು ಸಂಗ್ರಹ ಮಾಡಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ವಾಹನಗಳ ಮೇಲೆ ವಿಧಿಸುವ ತೆರಿಗೆ ಸುಮಾರು ಶೇ.13ರಿಂದ 20ರವರೆಗೆ ಇದೆ. ಆದರೆ ಪುದುಚೇರಿಯಲ್ಲಿ ಇದೇ ವಾಹನಗಳಿಗೆ ಕಡಿಮೆ ಪ್ರಮಾಣದ ತೆರಿಗೆ ವಿಧಿಸಲಾಗುತ್ತದೆ. ಈ ಹಿನ್ನೆಲೆ ಲಕ್ಷಾಂತರ ರೂ. ದುಬಾರಿ ಕಾರ್ ಕೊಳ್ಳುವಾಗ ಹೆಚ್ಚಿನ ಹಣ ಉಳಿಯುತ್ತದೆ ಎಂದು ಪುದುಚೇರಿಯಲ್ಲಿ ಮಾಲೀಕರು ವಾಹನ ಖರೀದಿಸುತ್ತಿದ್ದಾರೆ.