ಚಿಕ್ಕಮಗಳೂರು, ಏ. 10 (DaijiworldNews/AK): ರಾಜ್ಯದ ಅತ್ಯಂತ ಎತ್ತರದ ಪ್ರದೇಶ ಕಾಫಿನಾಡ ದತ್ತಪೀಠದ ಮಾಣಿಕ್ಯಾಧಾರ ಬಳಿ ಬಾಲಕಿ ನಾಪತ್ತೆಯಾದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

ಬಾಲಕಿ ಶ್ರೀನಂದಾ ತಾಯಿ ರೋಹಿಣಿ ಈ ಬಗ್ಗೆ ಪೊಲೀಸರ ಜೊತೆ ಚರ್ಚಿಸಿದ್ದು, ಮಗಳು ಆಕಸ್ಮಿಕವಾಗಿ ಬಿದ್ದಿರಲು ಸಾಧ್ಯವಿಲ್ಲ. ಯಾರೋ ಮಾದಕ ದ್ರವ್ಯ ಕೊಟ್ಟು ಅಪಹರಿಸಿದ್ದಾರೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.
ನಾಪತ್ತೆಯಾದ ಬಾಲಕಿಯ ಹುಡುಕಾಟಕ್ಕಾಗಿ ನೂರಾರು ಪೊಲೀಸ್, ಅಗ್ನಿಶಾಮಕ ಹಾಗೂ ಅರಣ್ಯ ಸಿಬ್ಬಂದಿಗಳು ಸೊಂಟಕ್ಕೆ ಹಗ್ಗ ಕಟ್ಕೊಂಡು 300 ಅಡಿ ಆಳಕ್ಕೆ ಇಳಿದಿದ್ದಾರೆ. ಇತ್ತ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಕೂಡ ಚಿಕ್ಕಮಗಳೂರಿಗೆ ಭೇಟಿ ನೀಡಿದ್ದಾರೆ. ಈ ಮಧ್ಯೆ ಬಾಲಕಿ ನಾಪತ್ತೆ ಪ್ರಕರಣ ಸಂಬಂಧ ಆಕೆ ತಾಯಿ ಹೇಳಿಕೆ ಹೊಸ ಸಂಚಲನ ಸೃಷ್ಟಿಸಿದೆ.
ಕೇರಳದ ಪಾಲಕ್ಕಾಡ್ ಮೂಲದ 10ನೇ ತರಗತಿ ವಿದ್ಯಾರ್ಥಿನಿಶ್ರೀನಂದಾ ಮಂಗಳವಾರ (ಏ.7) ಸಂಜೆ ಜಲಪಾತ ವೀಕ್ಷಿಸಲು ಹೋಗುವಾಗ ಕಣ್ಮರೆಯಾಗಿದ್ದಳು. 41 ಕುಟುಂಬದ ಸದಸ್ಯರೊಂದಿಗೆ ಹಂಪಿ ಪ್ರವಾಸ ಮುಗಿಸಿ ಇಲ್ಲಿಗೆ ಬಂದಿದ್ದ ಶ್ರೀನಂದಾ, ನಾಪತ್ತೆಯಾಗುವ ಕೇವಲ ಐದು ನಿಮಿಷಗಳ ಮೊದಲು ತಂದೆಯ ಮೊಬೈಲ್ನಲ್ಲಿ ಅತ್ಯಂತ ಖುಷಿಯಿಂದ ರೀಲ್ಸ್ ಮಾಡಿದ್ದಳು. ಆದರೆ, ಜನದಟ್ಟಣೆಯ ನಡುವೆ ಮೆಟ್ಟಿಲುಗಳನ್ನು ಇಳಿದು ಬರುವಾಗ ಅವಳು ಹಠಾತ್ತನೆ ಕಾಣೆಯಾಗಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.