ಚಿಕ್ಕಮಗಳೂರು,ಏ. 10 (DaijiworldNews/AK): ದತ್ತಪೀಠದ ತಪ್ಪಲಿನಲ್ಲಿ ನಾಪತ್ತೆಯಾಗಿದ್ದ ಕೇರಳದ ಪಾಲಕ್ಕಾಡ್ ಮೂಲದ ಬಾಲಕಿ ಶ್ರೀನಂದಾ (15) ಶವ ಪತ್ತೆಯಾಗಿದೆ.

ಅರಿಶಿನಗುಪ್ಪಿಯಿಂದ 5 ಕಿ.ಮೀ ದೂರದ, ಸುಮಾರು 1500 ಅಡಿ ಪ್ರಪಾತದಲ್ಲಿ ಬಾಲಕಿ ಮೃತದೇಹ ಪತ್ತೆಯಾಗಿದೆ. ಮಂಗಳವಾರ (ಏ.7) ಸಂಜೆ ಮಾಣಿಕ್ಯಾಧಾರ ಜಲಪಾತ ವೀಕ್ಷಿಸಲು ಹೋಗುವಾಗ ಬಾಲಕಿ ಕಣ್ಮರೆಯಾಗಿದ್ದಳು.
41 ಕುಟುಂಬದ ಸದಸ್ಯರೊಂದಿಗೆ ಹಂಪಿ ಪ್ರವಾಸ ಮುಗಿಸಿ ಇಲ್ಲಿಗೆ ಬಂದಿದ್ದ ಶ್ರೀನಂದಾ, ನಾಪತ್ತೆಯಾಗುವ ಕೇವಲ ಐದು ನಿಮಿಷಗಳ ಮೊದಲು ತಂದೆಯ ಮೊಬೈಲ್ನಲ್ಲಿ ಅತ್ಯಂತ ಖುಷಿಯಿಂದ ರೀಲ್ಸ್ ಮಾಡಿದ್ದಳು. ಆದರೆ, ಜನದಟ್ಟಣೆಯ ನಡುವೆ ಮೆಟ್ಟಿಲುಗಳನ್ನು ಇಳಿದು ಬರುವಾಗ ಅವಳು ಹಠಾತ್ತನೆ ಕಾಣೆಯಾಗಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿತ್ತು. ಇದೀಗ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ.