ನವದೆಹಲಿ, ಏ. 10 (DaijiworldNews/TA) : ದೇಶದ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್ಪ್ರೆಸ್ವೇಗಳಲ್ಲಿರುವ ಎಲ್ಲಾ ಟೋಲ್ ಬೂತ್ಗಳಲ್ಲಿ ಇಂದಿನಿಂದ ಸಂಪೂರ್ಣವಾಗಿ ಫಾಸ್ಟ್ಯಾಗ್ ಆಧಾರಿತ ಡಿಜಿಟಲ್ ಟೋಲ್ ಕಲೆಕ್ಷನ್ ವ್ಯವಸ್ಥೆ ಜಾರಿಗೆ ಬಂದಿದೆ. ಇದರೊಂದಿಗೆ ನಗದು ಪಾವತಿ ಆಯ್ಕೆಯನ್ನು ಬಹುತೇಕವಾಗಿ ಹಂತ ಹಂತವಾಗಿ ಸ್ಥಗಿತಗೊಳಿಸಲಾಗಿದ್ದು, ಎಲ್ಲಾ ವಾಹನಗಳು ಫಾಸ್ಟ್ಯಾಗ್ ಮೂಲಕವೇ ಟೋಲ್ ಪಾವತಿಸಬೇಕಾಗಿದೆ.

ಹೆದ್ದಾರಿಗಳಲ್ಲಿ ಉಂಟಾಗುತ್ತಿದ್ದ ವಾಹನ ದಟ್ಟಣೆ, ಟೋಲ್ ಬೂತ್ಗಳಲ್ಲಿ ಹೆಚ್ಚುತ್ತಿರುವ ಕಾಯುವಿಕೆ ಸಮಯ ಹಾಗೂ ಸಂಚಾರ ಅಡಚಣೆಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಡಿಜಿಟಲ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ಅನುಷ್ಠಾನಕ್ಕೆ ತರಲಾಗಿದೆ ಎಂದು ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ. ಇನ್ನು ಮುಂದೆ ಫಾಸ್ಟ್ಯಾಗ್ ಇಲ್ಲದ ಅಥವಾ ಸಕ್ರಿಯವಾಗಿಲ್ಲದ ವಾಹನಗಳಿಗೆ ನೇರ ನಗದು ಪಾವತಿ ಅವಕಾಶ ನೀಡಲಾಗುವುದಿಲ್ಲ.
ಫಾಸ್ಟ್ಯಾಗ್ ಸರಿಯಾಗಿ ಕಾರ್ಯನಿರ್ವಹಿಸದ ಸಂದರ್ಭದಲ್ಲಿ ವಾಹನ ಸವಾರರು UPI ಸೇರಿದಂತೆ ಇತರ ಡಿಜಿಟಲ್ ಪಾವತಿ ವಿಧಾನಗಳ ಮೂಲಕ ಟೋಲ್ ಪಾವತಿ ಮಾಡಬಹುದು ಎಂದು ತಿಳಿಸಲಾಗಿದೆ. ಆದರೆ ಈ ರೀತಿಯ ಪಾವತಿಗೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ಸಾಮಾನ್ಯ ಟೋಲ್ ಮೊತ್ತಕ್ಕಿಂತ ಸುಮಾರು 125% ವರೆಗೆ ಪಾವತಿಸಬೇಕಾಗುವ ಸಾಧ್ಯತೆ ಇದೆ. ಉದಾಹರಣೆಗೆ ರೂ100 ಟೋಲ್ಗೆ ರೂ125 ಪಾವತಿಸಬೇಕಾಗುತ್ತದೆ.
ಅಲ್ಲದೆ, ಟೋಲ್ ಬೂತ್ಗಳಲ್ಲಿ ಅನಧಿಕೃತ ವಿನಾಯಿತಿ ಪಡೆಯಲು ಪ್ರಯತ್ನಿಸುವ ಘಟನೆಗಳನ್ನು ತಡೆಯಲು ಸರ್ಕಾರ ಕಠಿಣ ಕ್ರಮಗಳನ್ನು ಜಾರಿಗೆ ತಂದಿದೆ. ನಿರ್ದಿಷ್ಟವಾಗಿ ಅನುಮೋದಿತ ವಾಹನಗಳನ್ನು ಹೊರತುಪಡಿಸಿ ಯಾವುದೇ ವ್ಯಕ್ತಿ ಅಥವಾ ಗುಂಪಿಗೆ ವಿನಾಯಿತಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ನಿಯಮಿತವಾಗಿ ಹೆದ್ದಾರಿಗಳನ್ನು ಬಳಸುವ ಖಾಸಗಿ ವಾಹನ ಮಾಲೀಕರಿಗಾಗಿ ಫಾಸ್ಟ್ಯಾಗ್ ವಾರ್ಷಿಕ ಪಾಸ್ ವ್ಯವಸ್ಥೆಯನ್ನೂ ಪರಿಚಯಿಸಲಾಗಿದೆ. ಈ ಪಾಸ್ ಮೂಲಕ ವರ್ಷಕ್ಕೆ ನಿಗದಿತ ಸಂಖ್ಯೆಯ ಟೋಲ್ ಕ್ರಾಸಿಂಗ್ಗಳನ್ನು ಬಳಸುವ ಅವಕಾಶ ನೀಡಲಾಗುತ್ತದೆ. ಈ ಪಾಸ್ನ ದರವನ್ನು ಇತ್ತೀಚೆಗೆ ಪರಿಷ್ಕರಿಸಲಾಗಿದ್ದು, ರೂ.3,000 ರಿಂದ ರೂ. 3,075ಕ್ಕೆ ಹೆಚ್ಚಿಸಲಾಗಿದೆ.