ಮಥುರಾ, ಏ. 10 (DaijiworldNews/TA) : ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ವೃಂದಾವನದ ಶೃಂಗಾರ್ ಘಾಟ್ ಬಳಿ ಯಮುನಾ ನದಿಯಲ್ಲಿ ಭಕ್ತರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮಗುಚಿದ ಪರಿಣಾಮ 10 ಮಂದಿ ಸಾವನ್ನಪ್ಪಿದ್ದು, ಹಲವರು ನಾಪತ್ತೆಯಾಗಿದ್ದಾರೆ.

ಪಂಜಾಬ್ನ ಲುಧಿಯಾನದಿಂದ ಬಂದ ಸುಮಾರು 25 ಭಕ್ತರು ದೋಣಿಯಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಭಕ್ತರು ದೇವಸ್ಥಾನ ದರ್ಶನಕ್ಕಾಗಿ ತೆರಳುತ್ತಿದ್ದಾಗ ದೋಣಿ ನಿಯಂತ್ರಣ ತಪ್ಪಿ ಮಗುಚಿದೆ ಎಂದು ತಿಳಿದುಬಂದಿದೆ. ಘಟನೆಯ ಬಳಿಕ ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದ್ದು, ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಈ ದುರಂತದ ಬಗ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಘಟನೆ ಹೃದಯ ವಿದ್ರಾವಕವಾಗಿದ್ದು, ಮೃತರ ಕುಟುಂಬಗಳಿಗೆ ತಮ್ಮ ಸಂತಾಪಗಳನ್ನು ಸೂಚಿಸಿದ್ದಾರೆ. ಜೊತೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣ ಸ್ಥಳಕ್ಕೆ ತೆರಳಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಚುರುಕುಗೊಳಿಸಲು ಹಾಗೂ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಒದಗಿಸಲು ಸೂಚನೆ ನೀಡಿದ್ದಾರೆ.
ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿರುವ ಮುಖ್ಯಮಂತ್ರಿ, ಘಟನೆಗೆ ಸಂಬಂಧಿಸಿದಂತೆ ಸಂಪೂರ್ಣ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.