ನವದೆಹಲಿ, ಆ 09 (Daijiworld News/SM): ಕೇಂದ್ರದ ಮಾಜಿ ಸಚಿವ ಹಾಗೂ ಬಿಜೆಪಿಯ ಹಿರಿಯ ಮುಖಂಡ ಅರುಣ್ ಜೇಟ್ಲಿ ಅವರ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದೆ. ಅವರನ್ನು ಇದೀಗ ದೆಹಲಿಯ ಏಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಬಿಜೆಪಿಯ ಹಿರಿಯ ಮುಖಂಡರಾಗಿರುವ ಅರುಣ್ ಜೇಟ್ಲಿ ಮೋದಿ ಸಂಪುಟದಲ್ಲಿ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ್ದರು. ಮೂಲಗಳ ಪ್ರಕಾರ ಇಂದು ಬೆಳಿಗ್ಗೆ 11 ಗಂಟೆಗೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಇನ್ನು ಅರುಣ್ ಜೇಟ್ಲಿಯವರಿಗೆ ಚಿಕಿತ್ಸೆ ಮುಂದುವರೆಸಲಾಗಿದ್ದು, ಅವರ ಆರೋಗ್ಯ ಸುಧಾರಿಸಿದೆ ಎಂದು ತಿಳಿದುಬಂದಿದೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಕೆಲವು ತಿಂಗಳ ಹಿಂದೆ ಅಮೇರಿಕಾದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಹಾಗೂ ಆರೋಗ್ಯ ಸುಧಾರಿಸಿದ ಬಳಿಕ ಅವರು ತಾಯ್ನಾಡಿಗೆ ಮರಳಿದ್ದರು. ಅನಾರೋಗ್ಯದ ಕಾರಣದಿಂದಾಗಿಯೇ ಅವರು, ಮೋದಿ ಸಂಪುಟದಲ್ಲಿ 2ನೇ ಅವಧಿಗೆ ಸಚಿವ ಸ್ಥಾನ ನಿರಾಕರಿಸಿದ್ದರು. ಇದೀಗ ಅವರ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದೆ. ಹಾಗೂ ಅವರನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಿಕಿತ್ಸೆ ಪಡೆಯುತ್ತಿರುವ ಹಿರಿಯ ನಾಯಕ ಜೇಟ್ಲಿ ಅವರನ್ನು ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.