ನವದೆಹಲಿ, ಏ. 11 (DaijiworldNews/AA): 4 ರಾಜ್ಯಗಳ ಹಲವು ನಗರಗಳ ಆಯಕಟ್ಟಿನ ಜಾಗದಲ್ಲಿ ಭಾರತದ ಸೇನೆಯ ಚಲನವಲನಗಳನ್ನು ವೀಕ್ಷಿಸಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಸಿಸಿಟಿವಿ ಅಳವಡಿಸಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.

ನಿಷೇಧಿತ ಬಬ್ಬರ್ ಖಾಲ್ಸಾ ಇಂಟರ್ ನ್ಯಾಷನಲ್ ಉಗ್ರ ಸಂಘಟನೆಯ ಸ್ಥಳೀಯ ಕಾರ್ಯಕರ್ತರನ್ನು ಬಳಸಿಕೊಂಡು ಕಾರ್ಯನಿರ್ವಹಿಸುತ್ತಿದ್ದ ಶಸ್ತ್ರಾಸ್ತ್ರ ಹಾಗೂ ಬೇಹುಗಾರಿಕಾ ಜಾಲವೊಂದನ್ನು ದೆಹಲಿ ಪೊಲೀಸರ ವಿಶೇಷ ಪಡೆ ಭೇದಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಪಂಜಾಬ್, ರಾಜಸ್ಥಾನ, ಹರ್ಯಾಣ, ಕಾಶ್ಮೀರದ ಗಡಿಯಲ್ಲಿನ ಸೂಕ್ಷ ಮಿಲಿಟರಿ ನೆಲೆಗಳ ಸಮೀಪ ಸೋಲಾರ್ ಆಧಾರಿತ ಸಿಸಿಟಿವಿ ಕ್ಯಾಮೆರಾಗಳನ್ನು ರಹಸ್ಯವಾಗಿ ಅಳವಡಿಸುವ ಮೂಲಕ ಪಾಕಿಸ್ತಾನಕ್ಕೆ ರಿಯಲ್ ಟೈಮ್ನಲ್ಲಿ ಸೇನಾ ಪಡೆಗಳ ಓಡಾಟದ ಮಾಹಿತಿ ರವಾನಿಸುತ್ತಿದ್ದರು. ಈ ಬಂಧನದಿಂದ ಸಂಭಾವ್ಯ ಭಯೋತ್ಪಾದನಾ ದಾಳಿಯನ್ನು ತಪ್ಪಿಸಿದಂತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ವಿಶೇಷ ಪಡೆ ಮೊದಲು ಪಂಜಾಬ್ ಮತ್ತು ದೆಹಲಿಯಲ್ಲಿ ಆರು ಮಂದಿಯನ್ನು ಬಂಧಿಸಿದ್ದು, ಸಿಸಿಟೀವಿ ಕ್ಯಾಮೆರಾ, ನಾಲ್ಕು ಪಿಸ್ತೂಲ್ಗಳು ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆದಿದೆ. ಎರಡನೇ ಕಾರ್ಯಾಚರಣೆಯನ್ನು ಮಿಲಿಟರಿ ಗುಪ್ತಚರ ಮಾಹಿತಿ ಆಧಾರದ ಮೇಲೆ ನಡೆಸಲಾಗಿದ್ದು, ಅದರಂತೆ ಪಂಜಾಬ್ನಲ್ಲಿ ಮತ್ತೆ 5 ಮಂದಿ ಬಂಧಿಸಲಾಗಿದೆ.
ದೇಶದ ಗಡಿ ಪ್ರದೇಶ, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿನ ಸೇನಾಪಡೆಗಳು ಓಡಾಡುವ ಪ್ರಮುಖ ಸ್ಥಳಗಳಲ್ಲಿ ಮೊಬೈಲ್ ಸಿಮ್ ಸಹಿತ ಕನಿಷ್ಠ 9 ಸೋಲಾರ್ ಸಿಸಿಕ್ಯಾಮೆರಾ ಅಳವಡಿಸಿತ್ತು. ರಾತ್ರಿ ಹೊತ್ತಲ್ಲೂ ಮತ್ತು ವಿದ್ಯುತ್ ಇಲ್ಲದಿದ್ದಾಗಲೂ ಸಿಸಿಟಿವಿ ದೃಶ್ಯಗಳು ಲಭ್ಯವಾಗಲಿ ಎಂದು ಸೌರಶಕ್ತಿ ಆಧರಿತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.