ಬೆಂಗಳೂರು, ಏ. 11 (DaijiworldNews/AA): ಈ ನಾಡು ಕಂಡ ಅತ್ಯಂತ ಕೆಟ್ಟ ಸರ್ಕಾರ ರಾಜ್ಯದಲ್ಲಿದೆ. ಸಿದ್ದರಾಮಯ್ಯ ನಿಜಕ್ಕೂ ಪ್ರಧಾನಿ ನರೇಂದ್ರ ಮೋದಿ ಅವರನ್ನ ನೋಡಿ ಕಲಿಯಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ವಾಗ್ದಾಳಿ ನಡೆಸಿದ್ದಾರೆ.

ಜಾತ್ಯತೀತ ಜನತಾದಳ ಪಕ್ಷ ಸ್ಥಾಪಿಸಿ 25 ವರ್ಷ ಪೂರೈಸಿದ ಹಿನ್ನೆಲೆ ಆಯೋಜಿಸಿದ್ದ 'ಜೆಡಿಎಸ್ ಬೆಳ್ಳಿ ಹಬ್ಬ' ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, "ಮುಸ್ಲಿಂ ಲೀಡರ್ ಗೆಲ್ಲಿಸಲು ದರಿದ್ರ ನಾರಾಯಣ ರ್ಯಾಲಿ ಮಾಡಿದೆ. ಆ ರ್ಯಾಲಿಗೆ ಸಿದ್ದರಾಮಯ್ಯ ಬರಲಿಲ್ಲ. ಕುಮಾರಸ್ವಾಮಿ ಸರ್ಕಾರ ತೆಗೆದಿದ್ದೂ ಕೂಡ ಅವ್ರೇ. ಸಿದ್ದರಾಮಯ್ಯ ಮೋದಿಯನ್ನ ನೋಡಿ ಕಲಿಯಬೇಕು. ನಿತೀಶ್ ಕುಮಾರ್ 20 ವರ್ಷ ಬಿಹಾರ ಸಿಎಂ ಆಗಿದ್ರು, ನಿತೀಶ್ಗೆ ಶಕ್ತಿ ಕೊಟ್ಟಿದ್ದು ಮೋದಿ" ಎಂದರು.
"ಸಿದ್ದರಾಮಯ್ಯ ಅವರು ಕುಮಾರಸ್ವಾಮಿ ಸರ್ಕಾರ ತೆಗೆಯುವಂತೆ ಮಾಡಿದ್ರು. ಆಗ ಮೋದಿಯವರು ಜೊತೆಗೆ ಬನ್ನಿ ಅಂತ ಕರೆದ್ರು. ನಾನು ಓಕೆ ಅಂದೆ. ಕಾಂಗ್ರೆಸ್ ಜೊತೆ ಇದ್ದು ಏಟಿನ ಮೇಲೆ ಏಟು ತಿಂದ್ವಿ. ಹಾಗಾಗಿ ಮೋದಿ ಜೊತೆಗೆ ಹೋಗಲು ಕುಮಾರಸ್ವಾಮಿಗೆ ಒಪ್ಪಿಗೆ ಕೊಟ್ಟೆ. ಈಗ ಕೇಂದ್ರ ಸಚಿವರಾಗಿ ಕೆಲಸ ಮಾಡಲು ಅವಕಾಶ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಸರ್ಕಾರ ಕುಮಾರಸ್ವಾಮಿಗೆ ಸಹಕಾರ ಕೊಡ್ತಿಲ್ಲ. HMT ಜಾಗದ ವಿಚಾರವಾಗಿ ಕೋರ್ಟ್ಗೆ ಹೋಗ್ತಾರೆ. ರಾಷ್ಟ್ರೀಯ ಪಕ್ಷದ ಜೊತೆ ಕೆಲಸ ಮಾಡುವಾಗ ನಮಗೂ ಇತಿಮಿತಿ ಇದೆ. ರಾಜ್ಯದಲ್ಲಿ ಅತ್ಯಂತ ನಾಡುಕಂಡ ಕೆಟ್ಟ ಸರ್ಕಾರ ಇದೆ. 2 ವರ್ಷ ಈ ಸರ್ಕಾರ ಇರಬಹುದು" ಎಂದು ಹೇಳಿದರು.
"ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ 2023-24 ರಲ್ಲಿ ಮಹಿಳಾ ಮೀಸಲಾತಿ ಬಗ್ಗೆ 33% ಕೊಡೋ ಬಗ್ಗೆ ತಿದ್ದುಪಡಿಯಲ್ಲಿ ತಂದು ರಾಜ್ಯಸಭೆ, ಲೋಕಸಭೆಯಲ್ಲಿ ಪಾಸ್ ಮಾಡಿಸಿದ್ರು. ಏಪ್ರಿಲ್ 16, 17, 18 ಇದರ ಬಗ್ಗೆ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ಆಗುತ್ತದೆ. ಅಲ್ಲದೇ 545 ಲೋಕಸಭಾ ಸ್ಥಾನ 858 ಕ್ಕೆ ಹೋಗುತ್ತದೆ. ಕರ್ನಾಟಕದ ಕ್ಷೇತ್ರಗಳ ಸಂಖ್ಯೆ 28 ರಿಂದ 42ಕ್ಕೆ ಏರುತ್ತದೆ" ಎಂದು ತಿಳಿಸಿದರು.