ಚೆನ್ನೈ, ಏ. 11 (DaijiworldNews/AA): ಯಾರೇ ಬಂದರೂ ಅವರನ್ನು ಎದುರಿಸುತ್ತೇವೆ, ನಮಗೆ ಯಾವುದೇ ಚಿಂತೆ ಇಲ್ಲ ಎಂದು ನಟ ದಳಪತಿ ವಿಜಯ್ ಅವರ ರಾಜಕೀಯ ಪ್ರವೇಶದ ಬಗ್ಗೆ ಇದೇ ಮೊದಲ ಬಾರಿಗೆ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ತಿಳಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, "ಡಿಎಂಕೆ ಯಾವುದೇ ಸವಾಲನ್ನು ಎದುರಿಸಲು ಸಿದ್ಧವಾಗಿದೆ. ಪಕ್ಷವು ಚಿಂತಿಸುತ್ತಿಲ್ಲ. ಸಾರ್ವಜನಿಕರು ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸುತ್ತಾರೆ. ಹಾಗೂ ಶೀಘ್ರದಲ್ಲೇ ಬದಲಾಗುತ್ತಾರೆ" ಎಂದರು.
"234 ಕ್ಷೇತ್ರಗಳಲ್ಲೂ ಡಿಎಂಕೆ ಮೈತ್ರಿಕೂಟ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಅವರು, ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರ ಇತ್ತೀಚಿನ ಹೇಳಿಕೆಗಳು ಹತಾಶೆ ಮತ್ತು ಸೋಲಿನ ಭಯವನ್ನು ಪ್ರತಿಬಿಂಬಿಸುತ್ತವೆ. ದ್ರಾವಿಡ ಪಕ್ಷವೊಂದು ದೆಹಲಿಯಿಂದ ನಿಯಂತ್ರಿಸಲ್ಪಡುತ್ತಿರುವುದು ಆತಂಕಕಾರಿ" ಎಂದು ಎಐಎಡಿಎಂಕೆ ವಿರುದ್ಧ ಕಿಡಿಕಾರಿದ್ದಾರೆ.
ತಮಿಳುನಾಡು ವಿಧಾನಸಭಾ ಚುನಾವಣೆಯು ಏಪ್ರಿಲ್ 23ರಂದು ನಡೆಯಲಿದ್ದು, ಮೇ 4 ರಂದು ಎಣಿಕೆ ನಡೆಯಲಿದೆ. ಡಿಎಂಕೆ ನೇತೃತ್ವದ ಕಾಂಗ್ರೆಸ್, ಡಿಎಂಡಿಕೆ ಹಾಗೂ ವಿಸಿಕೆ ಸೇರಿ ಎಡಪಕ್ಷಗಳ ಇಂಡಿಯಾ ಒಕ್ಕೂಟ ಮತ್ತು ಎಐಎಡಿಎಂಕೆ ನೇತೃತ್ವದ ಬಿಜೆಪಿ, ಪಿಎಂಕೆ ಎನ್ಡಿಎ ಒಕ್ಕೂಟ ಮತ್ತು ನಟ ವಿಜಯ್ ಅವರ ಟಿವಿಕೆ ನಡುವೆ ಹಣಾಹಣಿ ನಡೆಯಲಿದೆ.