ಪಶ್ಚಿಮ ಬಂಗಾಳ, ಏ. 11 (DaijiworldNews/AA): ಟಿಎಂಸಿಯ ಲೂಟಿ ಮತ್ತು ಸುಳ್ಳಿನ ರಾಜಕೀಯ, ಭಯದ ಆಳ್ವಿಕೆ ಶೀಘ್ರದಲ್ಲೇ ಕೊನೆಗೊಳ್ಳಲಿದೆ. ಬಂಗಾಳಿಗಳು ಅಲ್ಪಸಂಖ್ಯಾತರಾಗಲು ಬಿಜೆಪಿ ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ ದಕ್ಷಿಣ ದಿನಾಜ್ಪುರ ಜಿಲ್ಲೆಯಲ್ಲಿ ಇಂದು ನಡೆದ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, "ಟಿಎಂಸಿಗೆ ಯಾವುದೇ ಉದ್ದೇಶ ಅಥವಾ ನೀತಿ ಇಲ್ಲದ ಕಾರಣದಿಂದಾಗಿ ಇತರ ರಾಜ್ಯಗಳಲ್ಲಿ ಚುನಾವಣೆಗಳನ್ನು ಗೆಲ್ಲಲು ವಿಫಲವಾಗಿದೆ. ಟಿಎಂಸಿ ಬಿಜೆಪಿಯನ್ನು ನಿರಂತರವಾಗಿ ನಿಂದಿಸುತ್ತಿದೆ, ಸುಳ್ಳು ಹೇಳಿಕೆಗಳನ್ನು ನೀಡುತ್ತಿದೆ. ಆದರೆ, ಕಳೆದ 15 ವರ್ಷಗಳಲ್ಲಿ ಬಂಗಾಳದ ಅಭಿವೃದ್ಧಿಗಾಗಿ ಏನು ಮಾಡಿದೆ ಎಂದು ಹೇಳಲು ವಿಫಲವಾಗಿದೆ" ಎಂದರು.
"ಇದು ಭಯವನ್ನು ಸೋಲಿಸುವ ಯುದ್ಧ, ಇದು ನಂಬಿಕೆಯ ಮೇಲೆ ಬಂಗಾಳವನ್ನು ಮುನ್ನಡೆಸುವ ಯುದ್ಧ. ಟಿಎಂಸಿಯ ಭಯದ ಆಳ್ವಿಕೆಯು ಇನ್ನೇನು ಸ್ವಲ್ಪ ದಿನಗಳಲ್ಲಿ ಕೊನೆಗೊಳ್ಳುತ್ತಿದೆ. ಟಿಎಂಸಿಯ ಸುಳ್ಳುಗಳು ಮತ್ತು ಲೂಟಿಯ ಅಂಗಡಿ ಮುಚ್ಚಲಿದೆ" ಎಂದು ಹೇಳಿದರು.
"ಪಶ್ಚಿಮ ಬಂಗಾಳದಲ್ಲಿ ಓಲೈಕೆ ರಾಜಕೀಯವನ್ನು ಶಾಶ್ವತವಾಗಿ ಕೊನೆಗೊಳಿಸಲು ಬಿಜೆಪಿ ಯುಸಿಸಿಯನ್ನು ಜಾರಿಗೆ ತರಲು ಸಂಕಲ್ಪಿಸಿದೆ. ಬಂಗಾಳದಲ್ಲಿ ಬಂಗಾಳಿಗಳು ಅಲ್ಪಸಂಖ್ಯಾತರಾಗಲು ನಾವು ಅವಕಾಶ ನೀಡುವುದಿಲ್ಲ" ಎಂದು ತಿಳಿಸಿದರು.