ಬೀದರ್, ಏ. 11 (DaijiworldNews/AA): ನಮ್ಮ ಸರ್ಕಾರದ ಪರವಾಗಿ ಬರೆಯಿರಿ ಅಂತ ನಾನು ಯಾವತ್ತೂ ಫೋನ್ ಮಾಡಿಲ್ಲ. ಸಾಧ್ಯವಾದಷ್ಟು ವಸ್ತುನಿಷ್ಠೆ, ಸತ್ಯವನ್ನು ಜನರ ಮುಂದೆ ಇಡೋ ಕೆಲಸ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಬೀದರ್ನಲ್ಲಿ ನಡೆದ 40ನೇ ರಾಜ್ಯಮಟ್ಟದ ಕಾರ್ಯನಿರತ ಪತ್ರಕರ್ತ ಸಮ್ಮೇಳನವನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, "ನಾನು ಮಂತ್ರಿಯಾಗಿ 40 ವರ್ಷ ಆಯ್ತು. ನಮ್ಮ ಸರ್ಕಾರದ ಪರವಾಗಿ ಬರೆಯಿರಿ ಎಂದು ಇವತ್ತಿನವರೆಗೂ ನಾನು ಯಾರನ್ನೂ ಕೇಳಿಲ್ಲ. ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ನಾವು ಮಾಡುತ್ತಿದ್ದೀವಾ ಎಂದು ಪತ್ರಕರ್ತರು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಬೇಕು. ಊಹಾ ಪತ್ರಿಕೋದ್ಯಮ ಅತ್ಯಂತ ಅಪಾಯಕಾರಿಯಾದದ್ದು. ಕ್ಷುಲ್ಲಕ ವಿಚಾರವನ್ನು ದಿನವಿಡೀ ತೋರಿಸುವವರು ಅದರ ಪರಿಣಾಮದ ಬಗ್ಗೆಯೂ ಯೋಚಿಸಬೇಕು. ಗಂಡ ಹೆಂಡತಿ ಜಗಳವನ್ನು ಇಡೀ ದಿನ ತೋರಿಸಿದರೆ ಅದರಿಂದ ಸಮಾಜಕ್ಕೆ ಏನು ಪ್ರಯೋಜನ? ಸುದ್ದಿಯಿಂದ ಸಮಾಜಕ್ಕೆ ಏನಾದರೂ ಪ್ರಯೋಜನವಾಗಬೇಕು" ಎಂದರು.
"ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿ ಇಬ್ಬರೂ ಪತ್ರಕರ್ತರಾಗಿ ಧ್ವನಿ ಇಲ್ಲದವರ ಧ್ವನಿಯಾಗಿದ್ದರು. ಸಮಾಜದಲ್ಲಿರುವ ನ್ಯೂನ್ಯತೆಗಳನ್ನು ಹೋಗಲಾಡಿಸಿ ಸಮಾಜವನ್ನು ಕಟ್ಟುವ ಕಾಯಕವನ್ನು ಬಸವಾದಿ ಶರಣರು ಮಾಡಿದ್ದರು. ಶರಣರ ಆಶಯದ ಸಮಸಮಾಜ ಆಗದಿದ್ದರೆ ಅಸಮಾನತೆ ಮುಂದುವರೆಯುತ್ತದೆ. ಅದು ಮುಂದುವರೆಯಲಿ ಎನ್ನುವುದು ಪಟ್ಟಭದ್ರರ ಹಿತಾಸಕ್ತಿಯಾಗಿದೆ. ಯಾವ ದೇವರೂ ಯಾರನ್ನೂ ಕೂಡ ಅವಿದ್ಯಾವಂತನಾಗು ಅಂತಾಗಲೀ, ಕೆಳ ಜಾತಿಯಲ್ಲೇ ಹುಟ್ಟು ಎಂದು ಬಯಸುವುದಿಲ್ಲ. ಈ ಅರಿವನ್ನು ಜನರಲ್ಲಿ ಹೆಚ್ಚಿಸುವ ಕೆಲಸ ಪತ್ರಕರ್ತರಿಂದ ಆಗಬೇಕು. ಪತ್ರಕರ್ತರು ಕೇವಲ ಮಾಹಿತಿ ಕೊಡುವವರಾಗದೆ, ಸಮಾಜ ಸುಧಾರಣೆಗೂ ಒತ್ತು ನೀಡಬೇಕು" ಎಂದು ಹೇಳಿದರು.