ರಾಮ್ಪುರ, ಏ. 12 (DaijiworldNews/AA): ಯುಪಿಎಸ್ಸಿ ಪರೀಕ್ಷೆಯನ್ನು ಐಎಎಸ್, ಐಪಿಎಸ್ ಮತ್ತು ಐಎಫ್ಎಸ್ ನಂತಹ ಉನ್ನತ ಸರ್ಕಾರಿ ಸೇವೆಗಳಿಗೆ ಅಧಿಕಾರಿಗಳನ್ನು ನೇಮಿಸಿಕೊಳ್ಳಲು ನಡೆಸಲಾಗುತ್ತದೆ. ಈ ಪರೀಕ್ಷೆಯನ್ನು ತಮ್ಮ ಮೂರನೇ ಪ್ರಯತ್ನದಲ್ಲಿ ಉತ್ತೀರ್ಣರಾದ ಸಕ್ಷಮ್ ಭಾಟಿಯಾ ಅವರ ಯಶೋಗಾಥೆ ಇದು.

ಸಕ್ಷಮ್ ಭಾಟಿಯಾ ರಾಮ್ಪುರ ನಗರದ ಸರಾಯ್ ಗೇಟ್ ಪ್ರದೇಶದ ನಿವಾಸಿ. ಇವರ ತಂದೆ ಸುನಿಲ್ ಭಾಟಿಯಾ ಅವರು ಮಿಸ್ತಾನ್ ಗಂಜ್ನಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದರು. ಆದರೆ ಸುಮಾರು 18 ವರ್ಷಗಳ ಹಿಂದೆಯೇ ಅವರು ನಿಧನರಾಗಿದ್ದರು.
ಸಕ್ಷಮ್ ಬಾಲ್ಯದಿಂದಲೂ ಓದಿನಲ್ಲಿ ಬಹಳ ಮುಂದಿದ್ದರು. ರಾಮ್ಪುರದ ವೈಟ್ ಹಾಲ್ ಪಬ್ಲಿಕ್ ಸ್ಕೂಲ್ನಲ್ಲಿ ಶೇ. 98.4 ರಷ್ಟು ಅಂಕಗಳನ್ನು ಪಡೆಯುವ ಮೂಲಕ 12ನೇ ತರಗತಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದರು.
ಶಾಲಾ ಶಿಕ್ಷಣದ ನಂತರ, ಸಕ್ಷಮ್ ಅವರು ಮುಂದಿನ ವ್ಯಾಸಂಗಕ್ಕಾಗಿ ಕಾನ್ಪುರಕ್ಕೆ ತೆರಳಿದರು. ಬಳಿಕ ತಮ್ಮ ತಾಯಿಯೊಂದಿಗೆ ದೆಹಲಿಗೆ ಸ್ಥಳಾಂತರಗೊಂಡು, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು. ಪ್ರಸ್ತುತ ಅವರು ಪಿಎಚ್.ಡಿ ಮಾಡುತ್ತಿದ್ದು, ಇದರ ನಡುವೆಯೇ ಯುಪಿಎಸ್ಸಿ ಪರೀಕ್ಷೆಗೆ ಆನ್ಲೈನ್ ಮೂಲಕ ಸಿದ್ಧತೆ ಆರಂಭಿಸಿದ್ದರು.
ಯುಪಿಎಸ್ಸಿ ಪರೀಕ್ಷೆಗಾಗಿ ಸಕ್ಷಮ್ ಅವರು ಪ್ರತಿದಿನ 8 ರಿಂದ 9 ಗಂಟೆಗಳ ಕಾಲ ನಿರಂತರವಾಗಿ ಅಧ್ಯಯನ ಮಾಡುತ್ತಿದ್ದರು. ಮೊದಲ ಎರಡು ಪ್ರಯತ್ನಗಳಲ್ಲಿ ವಿಫಲರಾದರೂ ಧೃತಿಗೆಡದೆ, 2024ರಲ್ಲಿ ಮೂರನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ಅವರು 83ನೇ ರ್ಯಾಂಕ್ ಪಡೆದು ಉತ್ತೀರ್ಣರಾಗುವಲ್ಲಿ ಯಶಸ್ವಿಯಾದರು.
"ಮೊದಲ ಪ್ರಯತ್ನದಲ್ಲೇ ಯಶಸ್ಸು ಸಿಗದಿದ್ದರೆ ನಿರಾಶರಾಗಬೇಡಿ. ಸೋಲುಗಳನ್ನು ಮರೆತು ಮುನ್ನುಗ್ಗಿ, ಕಠಿಣ ಪರಿಶ್ರಮವಿದ್ದರೆ ಯಶಸ್ಸು ಖಂಡಿತ ನಿಮ್ಮದಾಗುತ್ತದೆ" ಎಂದು ಸಕ್ಷಮ್ ಅವರು ಹೇಳಿದ್ದಾರೆ.