ಬೆಂಗಳೂರು,ಆ.10 (Daijiworld News/RD): ರಾಜ್ಯದಲ್ಲಿ ವರುಣನ ಆರ್ಭಟ ಇಂದು ಕೂಡ ಮುಂದುವರಿಯುತ್ತಿದ್ದು, ರಾಜ್ಯದ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ನಡುವೆ ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಿಗೆ ಇಂದು ಕೇಂದ್ರ ಸರ್ಕಾರದ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಭೇಟಿ ನೀಡಲಿದ್ದಾರೆ.
ರಾಜ್ಯದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯದಲ್ಲಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಡ್ಯಾಂಗಳಿಂದ ನೀರು ಮನ್ನುಗ್ಗಿ ಬರುತ್ತಿದೆ, ಇನ್ನೊಂದೆಡೆ ಮಣ್ಣು ಸಡಿಲಗೊಂಡು ಸಾಗುವ ದಾರಿಯೇ ನಾಶವಾಗಿ ಹೋಗಿದೆ. ಬಹುತೇಕ ಕಡೆಗಳಲ್ಲಿ ಭೂಕುಸಿತ ಉಂಟಾಗಿದೆ. ಇದೀಗ ರಾಜ್ಯದ ಜನರು ಸಂಕಷ್ಟಕ್ಕೀಡಾಗಿದ್ದಾರೆ. ರಾಜ್ಯದ ಬಹುತೇಕ ಜಿಲ್ಲೆಗಳು ಅತೀವೃಷ್ಠಿಗೆ ಒಳಗಾಗಿದ್ದು. ಹೀಗಾಗಿ ಬೆಳಗಾವಿ, ಬಾಗಲಕೋಟೆ ಸೇರಿ ವಿವಿಧ ನೆರೆ ಪೀಡಿತ ಪ್ರದೇಶಗಳಿಗೆ ಇಂದು ಕೇಂದ್ರ ಸರ್ಕಾರದ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಭೇಟಿ ಆಗಲಿದ್ದಾರೆ.
ಪ್ರವಾಹಪೀಡಿತ ಪ್ರದೇಶಗಳಲ್ಲಿ ಅಪಾರ ಜನ ಮನೆ ಕಳೆದುಕೊಂಡಿದ್ದು, ಇನ್ನೂ ಕೆಲವರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 1.45 ಜನರನ್ನು ರಕ್ಷಿಸಲಾಗಿದೆ. ಶುಕ್ರವಾರ ಒಂದೇ ದಿನಕ್ಕೆ 10 ಜನರು ಮೃತಪಟ್ಟ ಘಟನೆ ನಡೆದಿದೆ. ಇನ್ನೂ ರಾಜ್ಯಾದ್ಯಂತ ಸುಮಾರು20.20ಲಕ್ಷ ಅಧಿಕ ಜನರು ತಮ್ಮ ಮನೆಯನ್ನು ಕಳೆದುಕೊಂಡಿದ್ದಾರೆ. 840 ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿದೆ. ಜೊತೆಗೆ 2.17 ಲಕ್ಷ ಹೆಕ್ಟೇರ್ ಜಮೀನು ಪ್ರವಾಹದ ಭೀತಿಗೆ ತುತ್ತಾಗಿ ನಾಶವಾಗಿದೆ.
ಕರ್ನಾಟಕ ಈಗಾಗಲೇ ಪ್ರವಾಹದಿಂದ ಮೃತಪಟ್ಟ ಕುಟುಂಬಗಳಿಗೆ ಸಿಎಂ ಯಡಿಯೂರಪ್ಪ ಐದು ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಕರಾವಳಿ, ಮಲೆನಾಡಿನಲ್ಲಿ ಸೇರಿದಂತೆ ಹಲವು ಕಡೆ ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಪರಿಣಾಮವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ