ಮೈಸೂರು,ಆ.10 (Daijiworld News/RD): ರಾಜ್ಯದಲ್ಲಿ ಪ್ರವಾಹದಿಂದ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಹಲವಾರು ಪ್ರದೇಶಗಳು ಈಗಾಗಲೇ ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಹೀಗಾಗಿ ಪ್ರವಾಹದಿಂದ ಸಿಲುಕಿರುವ ಸಂತ್ರಸ್ತರಿಗೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ್ವರತೀರ್ಥ ಸ್ವಾಮೀಜಿ ಮಠದಿಂದ ಹದಿನೈದು ಲಕ್ಷ ರೂ ನೆರವು ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಮೈಸೂರಿನ ಸರಸ್ವತಿ ಪುರಂನ ಕೃಷ್ಣಧಾಮದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ ರಾಜ್ಯದಲ್ಲಿ ಹಲವು ಕಡೆ ಪ್ರವಾಹ ಉಂಟಾಗಿದ್ದು ಜನರು ತೀರಾ ಸಂಕಷ್ಟದಲ್ಲಿದ್ದಾರೆ. ಸದ್ಯಕ್ಕೆ ಉತ್ತರ ಕನಾಟಕದ ಬೆಳಗಾವಿ ಜಿಲ್ಲೆಯ ಒಂದು ಪ್ರದೇಶವನ್ನು ಆಯ್ಕೆ ಮಾಡಿಕೊಂಡು ಪರಿಹಾರ ಕಾರ್ಯ ಕೈಗೊಳ್ಳಲಾಗಿದ್ದು, ಚಾತುರ್ಮಾಸದ ಕಾರಣ ನನಗೆ ನೆರೆ ಪೀಡಿತ ಪ್ರದೇಶಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಚಾತುರ್ಮಾಸ ಮುಗಿದ ನಂತರ ಧಾರವಾಡ, ಹುಬ್ಬಳ್ಳಿ, ಬೆಳಗಾವಿಗಳಲ್ಲಿ ಪಾದಯಾತ್ರೆ ಕೈಗೊಳ್ಳಲಾಗುವುದು ಎಂದು ಶ್ರೀಗಳು ಹೇಳಿದ್ದಾರೆ.
ಈಗಾಗಲೇ ನಮ್ಮ ಕಾರ್ಯಕರ್ತರನ್ನು ಕಳುಹಿಸಿ ಏನು ಮಾಡಬೇಕು ಎಂಬುವುದನ್ನು ತಕ್ಷಣ ಪರಿಶೀಲಿಸಿ ಮಠದಿಂದ ಎಷ್ಷು ಸಹಾಯ ಮಾಡಲು ಸಾಧ್ಯವಾಗುತ್ತದೋ ಅಷ್ಟು ಸಹಾಯ ಮಾಡುವುದಾಗಿ ಭರವಸೆ ನೀಡಿದರು. ಜೊತೆಗೆ ದೇಶ ವಿದೇಶದಲ್ಲಿರುವ ಭಕ್ತರು ಸಂತ್ರಸ್ತರ ಕಷ್ಟಕ್ಕೆ ಸ್ಪಂದಿಸಿ ತಮ್ಮ ಕೈಯಿಂದಾದಷ್ಟು ಸಹಾಯ ಮಾಡಬೇಕು. ಅದರಲ್ಲೂ ಯುವಕರು ಶ್ರಮದಾನ ಮಾಡಲು ಮುಂದಾಗಬೇಕು ಎಂದು ಹೇಳಿದರು. ಜೊತೆಗೆ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರೊಂದಿಗೆ ಈ ಕುರಿತು ಮಾತನಾಡುವುದಾಗಿ ತಿಳಿಸಿದರು. ಪ್ರವಾಹದಿಂದ ನೊಂದವರ ಬದುಕನ್ನು ಕಟ್ಟಿಕೊಡಲು ಮುಂದಾಗೋಣ ನಮ್ಮಲ್ಲಿದ್ದಷ್ಟು ಅವರಿಗೆ ಸಹಾಯ ಮಾಡೋಣ ಎಂದು ಈ ಸಂದರ್ಭದಲ್ಲಿ ಹೇಳಿದರು.