ಬೆಂಗಳೂರು,ಆ.10 (Daijiworld News/RD): ರಾಜ್ಯದಲ್ಲಿ ಭೀಕರ ಪ್ರವಾಹದಿಂದ ಕಂಗೆಟ್ಟಿದ್ದು, ಈ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರವಾಹಪೀಡಿತ ಪ್ರದೇಶಗಳಲ್ಲಿನ ಪರಿಸ್ಥಿತಿ, ನಷ್ಟ, ಪರಿಹಾರ ಕಾರ್ಯ, ಅನುದಾನ ಸೇರಿದಂತೆ ಹಲವು ಮಹತ್ತರ ವಿಷಯಗಳ ಕುರಿತು ಅಧಿಕಾರಿಗಳ ಜೊತೆ ಸಭೆ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಬಿ.ಎಸ್.ಯಡಿಯೂರಪ್ಪ, ಕಳೆದ ಒಂದು ವಾರದಿಂದ ಕರ್ನಾಟಕ ರಾಜ್ಯಾದ್ಯಂತ ಉತ್ತರ ಕರ್ನಾಟಕ, ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಪ್ರವಾಹದಿಂದಾಗಿ ಜನರು ಸಂಕಷ್ಟದ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಜೊತೆಗೆ ಹಲವೆಡೆ ಭೂ ಕುಸಿತದಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಪ್ರವಾಹದಿಂದಾಗಿ ಆಸ್ತಿ- ಪಾಸ್ತಿ ಸೇರಿದಂತೆ ಸಾಕಷ್ಟು ನಷ್ಟವಾಗಿದ್ದು, ರಾಜ್ಯದ ಸುಮಾರು ಅರ್ಧ ಭಾಗ ವರುಣನ ರೌದ್ರಾವತಾರಕ್ಕೆ ತುತ್ತಾಗಿದೆ. ಕಳೆದ 45 ವರ್ಷದಲ್ಲಿ ಇದೇ ಮೊದಲು ಇಷ್ಟು ದೊಡ್ಡ ಭೀಕರ ಪ್ರವಾಹ ಸಂಭವಿಸಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಧಿಕಾರಿಗಳಿಂದ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶದ ಮಾಹಿತಿ ಪಡೆದು, ಈವರೆಗೆ 16 ಜಿಲ್ಲೆಗಳ 80 ತಾಲೂಕುಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಇದರಿಂದ 24 ಜನ ಮೃತಪಟ್ಡಿದ್ದಾರೆ. ಈಗಾಗಲೇ ಮೃತ ಕುಟುಂಬದವರಿಗೆ 5 ಲಕ್ಷ ರೂ. ಪರಿಹಾರ ಕೊಡಲಾಗಿದೆ. ಅಧಿಕಾರಿಗಳ ಜೊತೆ ಚರ್ಚೆ ಮಾಡಿ 80 ತಾಲೂಕುಗಳನ್ನು ಪ್ರವಾಹ ಪೀಡಿತ ಎಂದು ಘೋಷಿಸಲಾಗಿದೆ. ಈಗಾಗಲೆ ಒಟ್ಟು 1,024 ಗ್ರಾಮಗಳು ಮಳೆ ಮತ್ತು ಪ್ರವಾಹದ ಭೀಕರತೆಯನ್ನು ಎದುರಿಸುತ್ತಿವೆ. 2.35 ಲಕ್ಷ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. 220 ಜಾನುವಾರುಗಳ ಸಾನ್ನಪ್ಪಿದ್ದು, 44 ಸಾವಿರ ಜಾನುವಾರಗಳನ್ನು ಸ್ಥಳಾಂತರ ಮಾಡಲಾಗಿದೆ. ರಾಜ್ಯದಲ್ಲಿ ಒಟ್ಟು 624 ಪರಿಹಾರ ಕೇಂದ್ರಗಳ ತೆರೆಯಲಾಗಿದೆ ಎಂದರು. ಪರಿಹಾರ ಕೇಂದ್ರದಲ್ಲಿ 1.57 ಲಕ್ಷಕ್ಕೂ ಹೆಚ್ಚ ಜನ ಆಶ್ರಯ ಮಾಡುತ್ತಿದ್ದಾರೆ. ಅವರಿಗೆ ಬೇಕಾದ ಎಲ್ಲ ಸೌಲಭ್ಯವನ್ನು ಒದಗಿಸಲಾಗಿದೆ. 3.22 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, 12,651 ಮನೆಗಳು ಸಂಪೂರ್ಣ ಹಾನಿಯಾಗಿದೆ ಎಂದು ಪ್ರವಾಹದ ಎಲ್ಲ ವಿವರಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪ ನೀಡಿದರು.
ನೆರೆಪೀಡಿತ ಪ್ರದೇಶದ ಸಂತೃರಸ್ಥರು ಕಾಪಾಡಲು ಕೇಂದ್ರ ಸರ್ಕಾರದಿಂದ ವಾಯು ಪಡೆಯ ನಾಲ್ಕು ಹೆಲಿಕಾಪ್ಟರ್ಗಳು, ಅಗ್ನಿಶಾಮಕ ದಳ ಭೂ, ನೌಕಾ ಪಡೆಗಳ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತಮ್ಮನ್ನು ತಾವು ತೊಡಗಿದ್ದಾರೆ. ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಜೊತೆಗೆ ಆಯಾ ಜಿಲ್ಲೆಯ ಶಾಸಕರು, ಸಂಸದರು ಪಕ್ಷಾತೀತವಾಗಿ ಪ್ರಸ್ತುತ ಸ್ಥಿತಿಗತಿಗಳನ್ನು ಅರಿತುಕೊಂಡು ಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪ್ರವಾಹದ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳುವ ಸಲುವಾಗಿ ಯಾವ ಸಮಯದಲ್ಲೂ ಪರಿಹಾರ ನೀಡಲು ಮುಂದಾಗಿದೆ. ಸಂತ್ರಸ್ಥರ ಸುರಕ್ಷತೆಗಾಗಿ ಮತ್ತು ಅವರಿಗೆ ಪುನರ್ವಸತಿ ಕಲ್ಪಸಿ ಕೊಡುವ ನಿಟ್ಟಿನಲ್ಲಿ ಎಷ್ಟು ಬೇಕಾದರು ಖರ್ಚು ಮಾಡಿ ಅವರಿಗೆ ಮೂಲಭೂತ ಸೌಕರ್ಯವನ್ನು ಒದಗಿಸಿಕೊಡುವುದಾಗಿ ಭರವಸೆ ನೀಡಿದರು.
ರಾಜ್ಯದಲ್ಲಿ ಜಲಾವೃತಗೊಂಡ ಎಲ್ಲಾ ಪ್ರದೇಶಕ್ಕೆ ಪರಿಹಾರ ಕಾರ್ಯ ನೀಡಲು ಸರ್ಕಾರ ಮುಂದಾಗಿದ್ದು, ಜೊತೆಗೆ ಸರ್ಕಾರಿ ನೌಕರರು ತಮ್ಮ ಒಂದು ದಿನದ ವೇತನ ಒಟ್ಟು 150 ಕೋಟಿ ರೂ ಕೊಡುವುದಾಗಿ ಫೋಷಿಸಿದ್ದಾರೆ. ಈಗಾಗಲೇ ಬೇರೆ ಬೇರೆ ಸಂಘ, ಸಂಸ್ಥೆಗಳು 50 ಕೋಟಿ ಕೊಡುತ್ತೇವೆ ಎಂದಿದ್ದಾರೆ. ಇನ್ಫೋಸಿಸ್ ಸಂಸ್ಥಾಪಕರಾದ ಸುಧಾಮೂರ್ತಿ ಅವರು ಈಗಾಗಲೇ 10 ಕೋಟಿ ರೂ. ನೆರವು ನೀಡಿದ್ದಾರೆ. ಈ ನಡುವೆ ಪೊಲೀಸ್ ಮತ್ತು ಸಾರಿಗೆ ಇಲಾಖೆ ಒಂದು ದಿನ ಸಂಬಳವನ್ನು ಕೊಡಲು ಒಪ್ಪಿದ್ದು, ಹಾಲು ಉತ್ಪಾದಕ ಘಟಕದಿಂದ 1 ಕೋಟಿ ರೂ. ಕೊಟ್ಟಿದ್ದಾರೆ. ಶಾಸಕರ ಕ್ಷೇಮಾಭಿವೃದ್ದಿ ನಿಧಿಯಿಂದ 2 ಕೋಟಿ ರೂ. ಕೊಡಲಾಗಿದೆ. ಹೀಗೆ ಹಲವು ರೀತಿಯಲ್ಲಿ ದೇಶದ ಎಲ್ಲಾ ಕಡೆಯಿಂದ ಸಂತೃಸ್ತರಿಗೆ ಪರಿಹಾರ ನಿಧಿಯನ್ನು ಘೋಷಿಸಿದ್ದಾರೆ ಎಂದು ಸಿಎಂ ಬಿಎಸ್ವೈ ಈ ಸಂದರ್ಭದಲ್ಲಿ ತಿಳಿಸಿದರು.