ನವದೆಹಲಿ, ಆ 10 (Daijiworld News/MSP): ಸೊಸೆಯ ಮೇಲೆ ಅತ್ಯಾಚಾರ ಎಸಗಿದ ಮಾಜಿ ಬಿಜೆಪಿ ಶಾಸಕನ ವಿರುದ್ಧ ದೆಹಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಸ್ತೂಲ್ ತೋರಿಸಿ ಬೆದರಿಸಿ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅತ್ಯಾಚಾರ ನಡೆಸಿದ ಆರೋಪಿಯನ್ನು ಮಾಜಿ ಶಾಸಕ ಮನೋಜ್ ಶೂಕೇನ್ ಎಂದು ಗುರುತಿಸಲಾಗಿದೆ. ಶೂಕೇನ್, ದೆಹಲಿಯ ನಂಗ್ಲೋಯಿ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದರು. ಆದರೆ ಈ ಬಾರಿಯ ಚುನಾವಣೆಯಲ್ಲಿ ಸೋತಿದ್ದರು. ಸಂತ್ರಸ್ತೆ ದೂರಿನಲ್ಲಿ ವಿವರಿಸಿರುವಂತೆ 2018 ರ ಡಿಸೆಂಬರ್ 31ರ ಮಧ್ಯರಾತ್ರಿ ಈ ಘಟನೆ ನಡೆದಿದೆ.
ಸಂತ್ರಸ್ತೆ, ಹಾಗೂ ಆಕೆಯ ಪತಿ ಮತ್ತು ಆಕೆಯ ಮೂವರು ಸಹೋದರರು ಪಾಶ್ಚಿಮ್ ವಿಹಾರ ಪ್ರದೇಶದಲ್ಲಿರುವ ಹೊಟೇಲ್ ವೊಂದಕ್ಕೆ ತೆರಳಿದ್ದರು. ಅಲ್ಲಿ ಹೊಸ ವರ್ಷದ ಪಾರ್ಟಿಯ ಬಳಿಕ ಸಂತ್ರಸ್ತೆಯ ಪತಿ ಸ್ನೇಹಿತರೊಂದಿಗೆ ತೆರಳಿದರೆ ಸಂತ್ರಸ್ತೆ ತನ್ನ ಮಾವನ ಮನೆಗೆ ಮರಳಿದ್ದಾರೆ. ಈ ವೇಳೆ ಸಂತ್ರಸ್ತೆ ಮಲಗಲು ಸಿದ್ದಳಾಗುತ್ತಿರುವಾಗ ಆಕೆಯ ಕೊಠಡಿಗೆ ಬಂದು ಮಾತನಾಡಬೇಕು ಎಂದು ಮಾಜಿ ಶಾಸಕನಾಗಿದ್ದ ಮಾವ ತಿಳಿಸಿ ಅಸಭ್ಯವಾಗಿ ವರ್ತಿಸತೊಡಗಿದ್ದಾನೆ. ಸಂತ್ರಸ್ತೆ ಕೊಠಡಿ ಬಿಟ್ಟು ಹೊರ ಹೋಗುವಂತೆ ಕಿರುಚಿದಾಗ ತಮ್ಮ ಬಳಿಯಿದ್ದ ಪಿಸ್ತೂಲ್ ಹೊರತೆಗೆದು ಗನ್ ಪಾಯಿಂಟ್ ತೋರಿಸಿ ಬೆದರಿಸಿ ಸುಮ್ಮನಿಲ್ಲದಿದ್ದರೆ ಸಂತ್ರಸ್ತೆಯ ಸಹೋದರನನ್ನು ಗುಂಡಿಟ್ಟು ಹತ್ಯೆ ಮಾಡುವುದಾಗಿ ಬೆದರಿಸಿ, ಅತ್ಯಾಚಾರ ನಡೆಸಿದ್ದಾರೆ ಎಂದು ದೂರಿನಲ್ಲಿ ಸಂತ್ರಸ್ತೆ ತಿಳಿಸಿದ್ದಾರೆ.