ಬೆಂಗಳೂರು, ಆ.12(Daijiworld News/SS): ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಜುಲೈ 29ರಂದು ಅಧಿಕಾರಕ್ಕೆ ಬಂದಿದ್ದರೂ 'ಏಕವ್ಯಕ್ತಿ ' ಪ್ರದರ್ಶನ ನಡೆಯುತ್ತಿದೆ. ಈ ಬಗ್ಗೆ ಪ್ರತಿಪಕ್ಷಗಳು ಟೀಕೆ ವ್ಯಕ್ತಪಡಿಸುತ್ತಿದೆ. ಸರ್ಕಾರ ರಚನೆಯಾಗಿ ತಿಂಗಳು ಹತ್ತಿರವಾಗಿದ್ದರೂ ಇದೂವರೆಗೂ ಸಂಪುಟ ವಿಸ್ತರಣೆ ಸಾಧ್ಯವಾಗಿಲ್ಲ. ರಾಜ್ಯದಲ್ಲಿ ನೆರೆ ಪರಿಸ್ಥಿತಿ ತಲೆದೋರಿದ್ದು ಮಂತ್ರಿಗಳಿಲ್ಲದೇ ಯಡಿಯೂರಪ್ಪ ಒಬ್ಬರೇ ಎಲ್ಲವನ್ನೂ ನಿಭಾಯಿಸುವ ಸ್ಥಿತಿ ತಲೆದೋರಿದೆ.
ಮೊದಲು ಪರಿಹಾರ ಹಾಗೂ ಸಂತ್ರಸ್ತರ ಪುನರ್ವಸತಿಗೆ ಆದ್ಯತೆ ನೀಡಬೇಕು. ಆ.15ರ ಬಳಿಕ ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಿರ್ಧರಿಸೋಣ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ರಾಜ್ಯದ ಹದಿನೇಳಕ್ಕೂ ಹೆಚ್ಚು ಜಿಲ್ಲೆಗಳು ಪ್ರವಾಹ ಪೀಡಿತವಾಗಿರುವ ಹಿನ್ನೆಲೆಯಲ್ಲಿ ಸಂಪುಟ ರಚನೆ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗಲಿದ್ದು, ಸ್ವಾತಂತ್ರ್ಯೋತ್ಸವದ ಬಳಿಕವೇ ಈ ಪ್ರಕ್ರಿಯೆ ಅಂತಿಮಗೊಳಿಸಲು ವರಿಷ್ಠರು ನಿರ್ಧರಿಸಿದ್ದಾರೆ. ರಾಜ್ಯ ಪ್ರವಾಹ ಪೀಡಿತವಾಗಿದೆ. ಈ ಹಿನ್ನೆಲೆಯಲ್ಲಿ ಪರಿಹಾರ ಕಾರ್ಯಕ್ಕೆ ಮೊದಲ ಆದ್ಯತೆ ನೀಡಿರುವ ವರಿಷ್ಠರು ಆ ಬಳಿಕವೇ ಸಂಪುಟ ರಚನೆ ಮಾಡಲು ಸೂಚನೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಆ.15ರವರೆಗೆ ರಾಜ್ಯದಲ್ಲಿ ಪ್ರವಾಸ ಕೈಗೊಂಡು ಮಾರನೇ ದಿನವೇ ದಿಲ್ಲಿಗೆ ತೆರಳಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ.