ನವದೆಹಲಿ, ಆ.12(Daijiworld News/SS): ಜಮ್ಮು ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ಹಿಂಪಡೆದಿರುವ ಕೇಂದ್ರ ಸರ್ಕಾರ ನಿರ್ಧಾರದ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳಿಂದ ಭಿಗಿ ಭದ್ರತೆಯನ್ನು ಹೊಂದಿದ್ದ ಕಾಶ್ಮೀರ ಸಹಜ ಸ್ಥಿತಿಗೆ ಮರಳುತ್ತಿದೆ. ಸದ್ಯ ಜಮ್ಮು-ಕಾಶ್ಮೀರ ಶಾಂತ ಸ್ಥಿತಿಯಲ್ಲಿ ಮುಂದುವರಿದಿದ್ದು, ಈದ್ ಹಬ್ಬ ಆಚರಣೆಗೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.
ಈದ್ ಆಚರಣೆಗೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಭರವಸೆ ನೀಡಿತ್ತು. ಅದರಂತೆ ಅಗತ್ಯ ಸಾಮಗ್ರಿಗಳು ಜನರಿಗೆ ಸಿಗುವಂತೆ ಅಂಗಡಿಗಳನ್ನು ತೆರೆಯಲು ಹಾಗೂ ಜನರ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿದೆ. ಅಗತ್ಯ ಸಾಮಗ್ರಿಗಳನ್ನು ಮನೆಗೆ ತಲುಪಿಸಲಾಗುತ್ತಿದೆ. ದಿನಸಿ ಹಾಗೂ ಕುರಿಗಳ ಖರೀದಿಯಲ್ಲಿ ಕಾಶ್ಮೀರದ ಜನ ಮಗ್ನರಾಗಿದ್ದಾರೆ.
ಕಾಶ್ಮೀರದಲ್ಲಿ ದಿನಸಿ, ಮಾಂಸದ ಅಂಗಡಿಗಳನ್ನು ತೆರೆಯಲಾಗಿದ್ದು, ಎಟಿಎಂಗಳು ಸಹ ಆರಂಭವಾಗಿದೆ. ಜನರು ಎಟಿಎಂ ಹಾಗೂ ಕುರಿ ಮಾಂಸದ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತಿದ್ದ ದೃಶ್ಯಗಳು ಆ.11ರಂದು ಸಾಮಾನ್ಯವಾಗಿದ್ದವು.
ಈ ಬಗ್ಗೆ ಮಾಹಿತಿ ನೀಡಿರುವ ಕಾಶ್ಮೀರದ ವಿಭಾಗೀಯ ಆಯುಕ್ತ ಬಷೀರ್ ಖಾನ್, ‘ನಾವು ಜನರಿಗೆ ಭರವಸೆ ನೀಡಿದ್ದಂತೆ ಎಲ್ಲ ಕಡೆಗಳಲ್ಲಿ ರೇಷನ್ ಸಿಗುವ ರೀತಿ ಮಾಡಿದ್ದೇವೆ. ಸೂಕ್ತ ರೀತಿಯಲ್ಲಿ ಹಬ್ಬ ಆಚರಿಸಲು ಅವಕಾಶ ಮಾಡಿಕೊಟ್ಟಿದ್ದೇವೆ’ ಎಂದಿದ್ದಾರೆ.
ಶ್ರೀನಗರ ಸೇರಿ ಸೂಕ್ಷ್ಮ ಪ್ರದೇಶಗಳಲ್ಲಿ 144 ಸೆಕ್ಷನ್ ಮುಂದುವರಿಸಲಾಗಿದ್ದು, ಉಳಿದ 10 ಜಿಲ್ಲೆಗಳಲ್ಲಿ ಕರ್ಫ್ಯೂ ವಾಪಸ್ ಪಡೆಯಲಾಗಿದೆ. ಈ ಸ್ಥಳಗಳನ್ನು ಬಿಟ್ಟು ಉಳಿದ ಕಡೆಗಳಲ್ಲಿ ಗುಂಪು ಸೇರಲು, ನಮಾಜ್ ಮಾಡಲು ಅವಕಾಶ ನೀಡಲಾಗಿದೆ. ಜತೆಗೆ ಸ್ನೇಹಿತರು ಹಾಗೂ ಬಾಂಧವರನ್ನು ಭೇಟಿಯಾಗಲು ವಿವಿಧೆಡೆಗೆ ತೆರಳುವವರಿಗೆ ಬಸ್ ಸೌಲಭ್ಯ ಒದಗಿಸುವ ಬಗ್ಗೆಯೂ ನಿರ್ಧರಿಸಲಾಗಿದೆ.