ನವದೆಹಲಿ, ಆ.12(Daijiworld News/SS): ಜಮ್ಮು ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ಹಿಂಪಡೆದಿರುವ ಕೇಂದ್ರ ಸರ್ಕಾರ ನಿರ್ಧಾರದ ಹಿನ್ನೆಲೆಯಲ್ಲಿ, ಕಳೆದ ಕೆಲ ದಿನಗಳಿಂದ ಭಿಗಿ ಭದ್ರತೆಯನ್ನು ಹೊಂದಿದ್ದ ಕಾಶ್ಮೀರ ಸಹಜ ಸ್ಥಿತಿಗೆ ಮರಳುತ್ತಿದೆ. ಆದರೆ ಈ ನಡುವೆ ಪಾಕ್ ಮತ್ತೊಂದು ದಾಳಿ ನಡೆಸಲು ಸಂಚು ರೂಪಿಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬೆನ್ನಲ್ಲೇ, ಭಾರತದ ವಿರುದ್ಧ ಆಕ್ರೋಶಗೊಂಡಿರುವ ಪಾಕ್ ಉಗ್ರರು ಪುಲ್ವಾಮಾ ಮಾದರಿಯಲ್ಲಿ ಮತ್ತೊಂದು ದಾಳಿ ನಡೆಸಲು ಸಂಚು ಹೆಣೆದಿದ್ದಾರೆ. ಪಾಕ್ನ ಗುಪ್ತಚರ ಇಲಾಖೆ ಐಎಸ್ಐ ಈ ಕೃತ್ಯದ ಹೊಣೆ ಹೊತ್ತಿದ್ದು, ಜೈಷ್-ಎ-ಮೊಹಮ್ಮದ್ (ಜೆಇಎಂ) ಸಂಘಟನೆಯ ಮೂಲಕ ದಕ್ಷಿಣ ಕಾಶ್ಮೀರದಲ್ಲಿ ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯಕ್ಕೆ ಸಿದ್ಧತೆ ನಡೆಸಿರುವುದಾಗಿ ತಿಳಿದು ಬಂದಿದೆ.
ಕೆಲ ದಿನಗಳ ಹಿಂದೆ ಐಎಸ್ಐ ಹಿರಿಯ ಅಧಿಕಾರಿಗಳು ರಾವಲ್ಪಿಂಡಿಯಲ್ಲಿ ನಡೆಸಿದ ಸಭೆಯಲ್ಲಿ ಜೆಇಎಂನ ಕಮಾಂಡರ್ ಮುಫ್ತಿ ಅಸ್ಗರ್ ರೌಫ್ ಕೂಡ ಭಾಗವಹಿಸಿದ್ದ ಎನ್ನಲಾಗಿದೆ. ಭಾರತೀಯ ಯೋಧರ ಸಮವಸ್ತ್ರ ಧರಿಸಿ ದಾಳಿಗೆ ಮುನ್ನುಗ್ಗಬೇಕೆಂದು ಈತ ತನ್ನ ಸಂಘಟನೆಯ ಸದಸ್ಯರಿಗೆ ಸೂಚಿಸಿದ್ದಾನೆಂದು ತಿಳಿದು ಬಂದಿದೆ.
ಫೆ.14ರಂದು ಪುಲ್ವಾಮಾದಲ್ಲಿ ಜೆಇಎಂ ಉಗ್ರ ನಡೆಸಿದ್ದ ಆತ್ಮಾಹುತಿ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದರು.