ಹುಬ್ಬಳ್ಳಿ, ಆ.12(Daijiworld News/SS): ಮಳೆಯ ಆರ್ಭಟಕ್ಕೆ ಜನರು ಬೀದಿಗೆ ಬಂದಿದ್ದಾರೆ. ಈ ಹಿನ್ನಲೆ, ಸಂತ್ರಸ್ತರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಸೂಕ್ತ ನೆರವು ನೀಡಬೇಕು ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಉತ್ತರ ಕರ್ನಾಟಕದಾದ್ಯಂತ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಲಕ್ಷಾಂತರ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕುರುಕ್ಷೇತ್ರ ಸಿನೆಮಾದಲ್ಲಿ ತಾವು ಪಡೆದ ಸಂಭಾವನೆಯನ್ನು ನೆರೆ ಪರಿಹಾರವಾಗಿ ನೀಡುತ್ತೇನೆ ಎಂದು ತಿಳಿಸಿದ್ದಾರೆ.
ಪ್ರವಾಹದಿಂದಾಗಿ ಉತ್ತರ ಕರ್ನಾಟಕದ ಜನರು ತತ್ತರಿಸಿದ್ದಾರೆ. ಈ ಸಮಯದಲ್ಲಿ ನಾವು ರಾಜಕೀಯ ಮಾಡುವುದಿಲ್ಲ. ನಾನು ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಚಿಕ್ಕೋಡಿ, ಯಾದಗಿರಿಯ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತೇನೆ. ನಮ್ಮ ಪಕ್ಷದ ವತಿಯಿಂದ ಜನರಿಗೆ ಸಹಾಯ ಮಾಡುತ್ತೇವೆ. ಮಳೆಯ ಆರ್ಭಟಕ್ಕೆ ಜನರು ಬೀದಿಗೆ ಬಂದಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಸೂಕ್ತ ನೆರವು ನೀಡಬೇಕು ಎಂದು ಹೇಳಿದ್ದಾರೆ.
ನಮ್ಮ ಪಕ್ಷದಿಂದ ಉತ್ತರ ಕರ್ನಾಟಕದ ಪ್ರವಾಹ ಭಾಗಕ್ಕೆ ಹೋಗಲು ವರಿಷ್ಠರು ಸೂಚನೆ ನೀಡಿದ್ದಾರೆ. ಅದರಂತೆ ನಾಲ್ಕು ಲಾರಿಗಳಲ್ಲಿ ಅಗತ್ಯ ವಸ್ತುಪೂರೈಕೆ ಮಾಡಲಾಗುತ್ತಿದೆ. ನಾವು ಸಂತ್ರಸ್ಥರ ಪರ ನಿಲ್ಲುತ್ತೇವೆ. ನಾನು ಹುಬ್ಬಳ್ಳಿಯಿಂದ ಯಾದಗಿರಿವರೆಗೆ ಪ್ರವಾಸ ಕೈಗೊಳ್ಳುತ್ತೇನೆ ಎಂದು ತಿಳಿಸಿದ್ದರು.