ಬೆಂಗಳೂರು, ಆ.12(Daijiworld News/RD): 2008ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಿಎಂ ಯಡಿಯೂರಪ್ಪ, ಆ ಸಂದರ್ಭದಲ್ಲಿ ಇದೇ ರೀತಿಯಾದ ಭೀಕರ ಪ್ರವಾಹ ಉತ್ತರ ಕರ್ನಾಟಕದಲ್ಲಿ ಉಂಟಾಗಿದ್ದಾಗ ಆಗಿನ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಜೊತೆ ವೈಮಾನಿಕ ಸಮೀಕ್ಷೆ ಮಾಡಿದ್ದ, ಪೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮೋದಿ ಎಲ್ಲಿದ್ದಾರೆ? ಎಂಬ ಪ್ರಶ್ನೆಯನ್ನು ವ್ಯಕ್ತಪಡಿಸಿದ್ದಾರೆ.
2009ರಲ್ಲಿ ನೆರೆ ಉಂಟಾಗಿ ಕರ್ನಾಟಕ ಆಂಧ್ರಪ್ರದೇಶ ಸಂಕಷ್ಟಕ್ಕೆ ಸಿಲುಕಿದ್ದಾಗ ಆಗಿನ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು 2 ದಿನಗಳ ಕಾಲ ವೈಮಾನಿಕ ಸಮೀಕ್ಷೆ ನಡೆಸಿ 2000ಕೋಟಿ ಬಿಡುಗಡೆ ಮಾಡಿದ್ದರು. ಈಗಿನ ಜಲಪ್ರಳಯ 10 ಪಟ್ಟು ಹೆಚ್ಚು ಭೀಕರವಾಗಿದ್ದು ಈ ಪರಿಸ್ಥಿತಿಯನ್ನು ಪರಿಶೀಲಿಸಲು ಪ್ರಧಾನ ಮಂತ್ರಿಗಳೆಲ್ಲಿ? ರಾಜ್ಯ ಸರ್ಕಾರದ ಬೇಡಿಕೆ 6000 ಕೋಟಿ ಬಿಡುಗಡೆ ಯಾಕಿಲ್ಲ? ಆದರೆ ಈಗ ಇರುವ ಎನ್ ಡಿ ಎ ಸರ್ಕಾರ ಪರಿಹಾರ ನೀಡಲು ಏಕೆ ಹಿಂಜರಿಯುತ್ತಿದೆ ಎಂದು ಕಾಂಗ್ರೇಸ್ಸಿಗರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಸಿಎಂ ಯಡಿಯೂರಪ್ಪ ಅವರ ಜೊತೆ ವೈಮಾನಿಕ ಸಮೀಕ್ಷೆ ಮಾಡುತ್ತಿರುವ ಪೋಟೋ ಇದೀಗ ಎಲ್ಲಡೆ ವೈರಲ್ ಆಗಿದ್ದು, ಈ ಹಿಂದೆಯೂ ಕೂಡ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಇದೇ ರೀತಿಯಲ್ಲಿ ರಾಜ್ಯದಲ್ಲಿ ನೆರೆ ಉಂಟಾಗಿ ಜನಜೀವನ ತೀರಾ ಸಂಕಷ್ಟದಿಂದ ಕೂಡಿತ್ತು, ಆಗ ರಾಜ್ಯದ ನೆರವಿಗೆ ತುರ್ತಾಗಿ ಧಾವಿಸಿದ್ದ ಅಂದಿನ ಪ್ರಧಾನಿ ಕಾಂಗ್ರೆಸ್ನ ಮನಮೋಹನ್ ಸಿಂಗ್, ರಾಜ್ಯಕ್ಕೆ ಆಗಮಿಸಿ ಸಿಎಂ ಯಡಿಯೂರಪ್ಪ ಅವರೊಂದಿಗೆ ಒಟ್ಟಿಗೆ ವೈಮಾನಿಕ ಸಮೀಕ್ಷೆ ನಡೆಸಿದ್ದರು. ಜೊತೆಗೆ ಸಿಎಂ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ರಾಯಚೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕೇಂದ್ರದಿಂದ ರಾಜ್ಯಕ್ಕೆ ಭಾರಿ ನೆರವನ್ನು ಘೋಷಿಸಿದ್ದರು. ಯಡಿಯೂರಪ್ಪ ಅವರೂ ಸಹ ಮನಮೋಹನ್ ಸಿಂಗ್ ಅವರ ನೆರವಿಗೆ ತುಂಬು ಮನಸ್ಸಿನಿಂದ ಕೃತಜ್ಞತೆ ಸಲ್ಲಿಸಿದ್ದರು.
ರಾಜ್ಯದ ಇಂದಿನ ಪರಿಸ್ಥಿತಿ ಪ್ರವಾಹದಿಂದ ಕಂಗೆಟ್ಟು ಹೋಗಿದ್ದು, ಈ ಸ್ಥಿತಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೇವಲ ಎರಡು ಗಂಟೆ ಹತ್ತು ನಿಮಿಷಗಳ ಕಾಲ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ಇದುವರೆಗೂ ಕೇಂದ್ರ ಸರ್ಕಾರ ಯಾವುದೇ ರೀತಿಯ ತುರ್ತು ಕ್ರಮ ಕೈಗೊಂಡಿಲ್ಲ ಎಂದು ಮೋದಿ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.