ನವದೆಹಲಿ, ಆ.13(Daijiworld News/SS): ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬೆನ್ನಲ್ಲೇ ಪಾಕಿಸ್ತಾನ ಸಿ-130 ಸಾರಿಗೆ ವಿಮಾನದ ಮೂಲಕ ಲಡಾಖ್ ಸಮೀಪದ ತನ್ನ ನೆಲೆಗಳಿಗೆ ಯುದ್ಧ ಸಾಮಗ್ರಿ ರವಾನಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಭಾರತದೊಂದಿಗೆ ವ್ಯಾಪಾರ ಸಂಬಂಧ ಕಡಿದುಕೊಳ್ಳುವ ಮೂಲಕ ಪ್ರತೀಕಾರದ ಹೆಜ್ಜೆ ಇಟ್ಟಿದ್ದ ಪಾಕಿಸ್ತಾನ ಹೊಸ ಕೇಂದ್ರಾಡಳಿತ ಪ್ರದೇಶದ ಸ್ಥಾನ ಪಡೆದಿರುವ ಲಡಾಖ್ ಸನಿಹಕ್ಕೆ ಯುದ್ಧ ಸಾಮಗ್ರಿಗಳನ್ನು ದಿಢೀರ್ ರವಾನಿಸುತ್ತಿರುವ ಮಾಹಿತಿ ಬಹಿರಂಗವಾಗಿದೆ. ಮತ್ತೊಂದೆಡೆ ಜೈಷ್ ಸಂಘಟನೆಯ ಏಳು ಆತ್ಮಾಹುತಿ ದಾಳಿಕೋರರು ಭಾರತ ಪ್ರವೇಶಿಸಿರುವ ಶಂಕೆ ವ್ಯಕ್ತವಾಗಿದೆ.
ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದಕ್ಕೆ ಪ್ರತೀಕಾರವಾಗಿ ಪುಲ್ವಾಮಾ ಮಾದರಿಯಲ್ಲಿ ಆತ್ಮಾಹುತಿ ದಾಳಿ ನಡೆಸಲು ಸಂಚು ರೂಪಿಸಿರುವ ಜೈಷ್ ಉಗ್ರರ ತಂಡ ಈಗಾಗಲೇ ಭಾರತ ಪ್ರವೇಶಿಸಿರುವ ಆತಂಕ ವ್ಯಕ್ತವಾಗಿದೆ. ಜೈಷ್ನ 7 ಆತ್ಮಾಹುತಿ ದಾಳಿಕೋರರು ಬನಿಹಾಲ್ನ ದಕ್ಷಿಣ ಭಾಗ ಮತ್ತು ಪೀರ್ ಪಂಜಾಬ್ ಮೂಲಕ ಒಳ ನುಸುಳಿರುವ ಶಂಕೆ ಇದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.
ಉಗ್ರರು ಸ್ವಾತಂತ್ರ್ಯ ದಿನಾಚರಣೆಯಂದು ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸುವ ಸಂಚು ಹೊಂದಿದ್ದಾರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರ ಭದ್ರತೆ ಜತೆಗೆ ಉಗ್ರರ ಚಟುವಟಿಕೆಗಳ ಮೇಲೂ ಕಣ್ಣಿಡಲಾಗಿದೆ ಎಂದು ಮೂಲಗಳು ತಿಳಿಸಿದೆ.