ಕಾರವಾರ, ಆ 13 (Daijiworld News/MSP): ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಕಾಸೂರು ಸಮೀಪದ ಚಿಗಳ್ಳಿಯಲ್ಲಿರುವ "ಚಿಗಳ್ಳಿ ಡ್ಯಾಮ್ "ಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದ ಪರಿಣಾಮ ಡ್ಯಾಮ್ ಒಡೆದು ಹೋಗಿ ಏಕಾಏಕಿ ಅಪಾರ ಪ್ರಮಾಣದ ನೀರು ಹೊರಬಂದು ಸಾವಿರಾರು ಎಕ್ರೆ ಕೃಷಿ ಭೂಮಿ ನಾಶವಾಗಿದೆ.
ಡ್ಯಾಮ್ ಸುತ್ತಮುತ್ತವಿರುವ ಸುಮಾರು 5000 ಎಕರೆ ಕೃಷಿ ಭೂಮಿ ಇದ್ದು ಇವೆಲ್ಲವೂ ನೀರು ಪಾಲಾಗುವ ಲಕ್ಷಣಗಳು ಗೋಚರಿಸುತ್ತಿದೆ. ಇನ್ನು ಕೃತಕ ನೆರೆಯ ಪರಿಣಾಮ ಹುಬ್ಬಳ್ಳಿ - ಶಿರಸಿ- ಮುಂಡಗೋಡು ರಸ್ತೆ ಸಂಪರ್ಕ ಬಂದ್ ಆಗಿದೆ. ಡ್ಯಾಮ್ ನ ಬಳಿ ಇರುವ ಎರಡು ಹಳ್ಳಿಗಳಿಗೆ ನೀರು ಹರಿದುಬರುವ ಸಾಧ್ಯತೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಈಗಾಗಲೇ ಜನರಿಗೆ ಸ್ಥಳಾಂತರಗೊಳ್ಳಲು ಸೂಚನೆ ನೀಡಲಾಗಿದೆ. ಅಲ್ಲದೆ ನೂರಾರು ಮನೆಗಳು ಜಲಾವೃತವಾಗುವ ಭೀತಿಯಲ್ಲಿದೆ.
ಸ್ಥಳಕ್ಕೆ ಅಧಿಕಾರಿಗಳು ತಹಸೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. "ಇದೊಂದು ಚಕ್ ಡ್ಯಾಮ್ ಆಗಿರುವುದರಿಂದ ಜನ ಹೆದರುವ ಅವಶ್ಯಕತೆ ಇಲ್ಲ, ಈ ಅಣೆಕಟ್ಟು ಮಣ್ಣಿನ ದಿಬ್ಬದಿಂದ ಒಡ್ಡನ್ನು ನಿರ್ಮಿಸಿ ನಿರ್ಮಾಣ ಮಾಡಿರುವುದಾಗಿದೆ. ತೀವ್ರ ಮಳೆ ಹಾಗೂ ಡ್ಯಾಮ್ ಗೆ ಹೆಚ್ಚಿನ ಪ್ರಮಾಣದ ನೀರು ಹರಿದುಬಂದ ಕಾರಣ ಒತ್ತಡ ಹೆಚ್ಚಾಗಿ ಒಂದು ಭಾಗದಲ್ಲಿ ಬಿರುಕು ಬಿಟ್ಟು ಒಡೆದಿದೆ. ಹೀಗಾಗಿ ಕೃಷಿ ಭೂಮಿ ಮುಳುಗಡೆ ಆಗಿದೆ. ಇಲ್ಲಿನ ನೀರು ನೇರವಾಗಿ ಬೇಡ್ತಿ ನದಿಗೆ ಹರಿದುಹೋಗಲಿದೆ ಎಂದು ಅಲ್ಲಿನ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಚಿಗಳ್ಳಿ ಡ್ಯಾಮ್ 165 ಹೆಕ್ಟೇರ್ ವಿಸ್ತಾರ ಹೊಂದಿದ್ದು , 6800 ಕ್ಯೂಸೆಕ್ಸ್ ನೀರಿನ ಸಂಗ್ರಹನಾ ಸಾಮರ್ಥ್ಯವಿದೆ.