ಚಿಕ್ಕಮಗಳೂರು,ಆ.13.(Daijiworld News/RD): ಪ್ರವಾಹದಿಂದ ಒಂದೆಡೆ ಮನೆ, ಮಠವನ್ನು ಕಳೆದುಕೊಂಡರೆ, ಜೀವ ಉಳಿಸಿಕೊಳ್ಳಲು ಇನ್ನೊಬ್ಬರ ದಾರಿಯನ್ನು ಕಾಯುತ್ತಿರುವ ಜೀವಗಳು ಇನ್ನೊಂದೆಡೆ. ಜೀವ ಕಸಿದುಕೊಳ್ಳಲು ಬರುತ್ತಿರುವ ಮಳೆರಾಯ ರೌದ್ರವತಾರದ ನಡುವೆ ತನ್ನ ಜೀವವನ್ನೇ ಪಣಕಿಟ್ಟು, ಗಾಳಿ ಮಳೆಯನ್ನು ಲೆಕ್ಕಿಸದೆ, ಜಾತಿಮತ ಧರ್ಮಗಳ ಭೇಧವಿಲ್ಲದೆ ಅಪಾಯದಲ್ಲಿರುವರನ್ನು ರಕ್ಷಿಸುವ ನಮ್ಮ ವೀರ ಯೋಧರ ಕಾರ್ಯವೈಖರಿಗೆ ಎಷ್ಟು ಕೃತಜ್ಞತೆ ಹೇಳಿದರು ಕಡಿಮೆ. ಹೀಗಾಗಿ ಚಿಕ್ಕಮಗಳೂರಿನ ಮೂಡಿಗೆರೆ ಗ್ರಾಮಸ್ಥರು, ನಿಮ್ಮಿಂದ ನಮ್ಮ ಜೀವ ಉಳಿದಿದೆ ಎಂದು ಕಣ್ಣೀರಿಟ್ಟು ಪ್ರತಿಯೊಬ್ಬ ಸೈನಿಕರಿಗೂ ರಾಖಿ ಕಟ್ಟುವ ಮೂಲಕ ಕೃತಜ್ಞತೆಯನ್ನು ಅರ್ಪಿಸಿದರು.
ಚಿಕ್ಕಮಗಳೂರು ಜಿಲ್ಲೆಯು ಮಳೆಯ ಆರ್ಭಟಕ್ಕೆ ತ್ತತ್ತರಿಸಿ ಹೋಗಿದ್ದು, ಅಪಾಯದಲ್ಲಿದ್ದ ಅನೇಕ ಜನರನ್ನು ರಕ್ಷಿಸುವ ಮೂಲಕ ಯೋಧರು ರಕ್ಷಣಾ ಕಾರ್ಯಾಚರಣೆ ಮಾಡಿದ್ದರು. ಯೋಧರ ಈ ಕಾರ್ಯವನ್ನು ಹಲವು ಮಂದಿ ಶ್ಲಾಘಿಸಿದ್ದು, ನೂರಾರು ಜನರು ಭಾರತ್ ಮಾತಾಕೀ ಜೈ ಎಂದು ಘೋಷಣೆ ಕೂಗಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಯೋಧರು, ಇಂಡಿಯನ್ ಆರ್ಮಿ ನಿಮ್ಮ ರಕ್ಷಣೆಗಾಗಿ ಸದಾ ನಿಮ್ಮ ಜೊತೆ ಇರುತ್ತದೆ. ನೀವು ಯಾವಾಗ ಕರೆದರೂ ನಿಮ್ಮ ಸೇವೆಗೆ ಸಿದ್ಧ ಎಂದು ಭಾರತೀಯ ಸೇನೆ ತಿಳಿಸಿದೆ.
ಸದ್ಯ ಮಳೆರಾಯ ಕೊಂಚ ಬಿಡುವುಗೊಳಿಸಿದ್ದು, ಚಿಕ್ಕಮಗಳೂರಿನಲ್ಲಿ ಸಹಜ ಸ್ಥಿತಿಗೆ ಮರಳಿದ್ದು, ಹೀಗಾಗಿ ಮಿಲಿಟರಿ ಪಡೆ ಕಾರ್ಯಾಚರಣೆ ಮುಗಿಸಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದು, ಈ ಸಂದರ್ಭದಲ್ಲಿ ಗ್ರಾಮಸ್ಥರು ಯೋಧರಿಗೆ ರಾಖಿ ಕಟ್ಟಿ ಧನ್ಯವಾದ ತಿಳಿಸಿ, ಕಣ್ಣೀರು ಹಾಕುತ್ತಲೇ ಯೋಧರಿಗೆ ವಿದಾಯ ಹೇಳಿದ್ದಾರೆ. ಮೂಡಿಗೆರೆ ತಾಲೂಕಿನ ಹಲಗಡಕ ಗ್ರಾಮದಲ್ಲಿ ಗುಡ್ಡ ಕುಸಿತವಾಗಿತ್ತು. ಹೀಗಾಗಿ ಆ ಗ್ರಾಮಕ್ಕೆ ಸಂಚಾರ ಸ್ಥಗಿತಗೊಂಡಿತ್ತು ಹೀಗಾಗಿ 6 ದಿನಗಳಿಂದ ಗ್ರಾಮದಲ್ಲಿ ಕ್ಕೂ ಅಧಿಕ ಮಂದಿ ಅಪಾಯದಲ್ಲಿ ಸಿಲುಕಿಕೊಂಡಿದ್ದು, ಇವರನ್ನು ಸೇನೆ ಸೋಮವಾರ ರಕ್ಷಣೆ ಮಾಡಿದೆ. ಗುಡ್ಡ ಕುಸಿತದಿಂದಾಗಿ ರಸ್ತೆ ಸಂಚಾರ ಸ್ಥಗಿತಗೊಂಡಿದ್ದು, ವಾಹನ ವ್ಯವಸ್ಥೆ ಇಲ್ಲದ ಕಾರಣಕ್ಕೆ 4 ರೋಗಿಗಳನ್ನು 5 ಕಿ.ಮೀ. ಹೆಗಲ ಮೇಲೆಯೇ ಹೊತ್ತು ಸಾಗಿಸುವ ಮೂಲಕ ತಂಡ ಸುರಕ್ಷಿತ ಸ್ಥಳಕ್ಕೆ ಅವರನ್ನು ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈಗಾಗಲೆ ಚಿಕ್ಕಮಗಳೂರಿನಲ್ಲಿ ಪ್ರಸಿದ್ದ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ, ಬಾಬಾಬುಡನ್ ಗಿರಿ, ಸೀತಾಳಯ್ಯನಗಿರಿಗೆ ಸಂಚಾರವನ್ನು ಆ.14 ರವರೆಗೆ ನಿಷೇಧ ಹೇರಲಾಗಿದ್ದು. ಈ ಪ್ರದೇಶದಲ್ಲಿ ರಸ್ತೆ, ಹಾನಿ, ಗುಡ್ಡ ಕುಸಿತ ಉಂಟಾಗಿದೆ. ಈಗಾಗಲೇ ಈ ಜಿಲ್ಲೆಯಲ್ಲಿ 652 ಮನೆಗಳು ನೆಲಸಮಗೊಂಡಿದ್ದು, 2000 ಜನರು 27 ಪರಿಹಾರ ಕೇಂದ್ರದಲ್ಲಿ ಆಶ್ರಯ ನೀಡಲಾಗಿದೆ. ಇಬ್ಬರು ಭೂಕುಸಿತಕ್ಕೆ ಸಿಲುಕಿಕೊಂಡಿದ್ದು ಅವರ ಶವ ಇನ್ನಷ್ಟೇ ಸಿಗಬೇಕಿದೆ.