ನವದೆಹಲಿ, ಏ. 12 (DaijiworldNews/TA): ಭಾರತೀಯ ಸಿನಿಲೋಕದ ದಿಗ್ಗಜ ಗಾಯಕಿ ಆಶಾ ಭೋಸ್ಲೆ ಇಂದು ನಿಧನ ಹೊಂದಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು.

ನಿನ್ನೆ (ಏಪ್ರಿಲ್ 11) ತೀವ್ರ ಉಸಿರಾಟದ ತೊಂದರೆ ಹಾಗೂ ಎದೆನೋವಿನಿಂದ ಅವರು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಅವರು ಇಂದು ಮಧ್ಯಾಹ್ನ ವೇಳೆಗೆ ಕೊನೆಯುಸಿರೆಳೆದಿದ್ದಾರೆ. ಆಸ್ಪತ್ರೆಯ ವೈದ್ಯ ಡಾ. ಪ್ರತೀಕ್ ಸಂಧಾನಿ ಮಾಹಿತಿ ನೀಡಿದ್ದು, “ಅವರು ಬಹು ಅಂಗಾಂಗ ವೈಫಲ್ಯದಿಂದ ನಿಧನ ಹೊಂದಿದ್ದಾರೆ” ಎಂದು ತಿಳಿಸಿದ್ದಾರೆ.
ಆಶಾ ಭೋಸ್ಲೆ ಅವರು ಆಸ್ಪತ್ರೆಗೆ ದಾಖಲಾಗಿದ್ದ ಸುದ್ದಿ ಹೊರಬಿದ್ದ ಕೂಡಲೇ ಚಿತ್ರರಂಗದ ಗಣ್ಯರು ಮತ್ತು ಸಂಗೀತ ಕ್ಷೇತ್ರದ ಹಲವಾರು ಕಲಾವಿದರು ಅವರ ಶೀಘ್ರ ಚೇತರಿಕೆಗೆ ಪ್ರಾರ್ಥಿಸಿದ್ದರು. ಆದರೆ ಆ ಪ್ರಾರ್ಥನೆ ಫಲ ನೀಡದೆ, ಇದೀಗ ಅವರ ನಿಧನದಿಂದ ಭಾರತೀಯ ಸಂಗೀತ ಲೋಕ ಶೋಕಸಾಗರದಲ್ಲಿ ಮುಳುಗಿದೆ.
ಆಶಾ ಭೋಸ್ಲೆ ಅವರು ಹಿಂದಿ ಸೇರಿದಂತೆ ಕನ್ನಡ, ಮರಾಠಿ, ತಮಿಳು, ತೆಲುಗು, ಮಲಯಾಳಂ, ಅಸ್ಸಾಮೀಸ್, ಭೋಜ್ಪುರಿ, ನೇಪಾಳಿ, ಬೆಂಗಾಲಿ ಸೇರಿದಂತೆ ಅನೇಕ ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿ ಶ್ರೋತೃಗಳ ಮನ ಗೆದ್ದಿದ್ದರು. ತಮ್ಮ ವಿಶಿಷ್ಟ ಶೈಲಿ ಮತ್ತು ವೈವಿಧ್ಯಮಯ ಗಾಯನದಿಂದ ಅವರು ದಶಕಗಳ ಕಾಲ ಸಂಗೀತ ಲೋಕದಲ್ಲಿ ಅಗ್ರಸ್ಥಾನದಲ್ಲಿದ್ದರು.
ಗಾಯನ ಕ್ಷೇತ್ರದಲ್ಲಿ ಅವರು ಎರಡು ರಾಷ್ಟ್ರ ಪ್ರಶಸ್ತಿಗಳು ಸೇರಿದಂತೆ ಅನೇಕ ಗೌರವಗಳನ್ನು ಪಡೆದಿದ್ದಾರೆ. ‘ಏಷ್ಯಾ ನೈಟಿಂಗೇಲ್’ ಎಂಬ ಬಿರುದಿನಿಂದಲೂ ಅವರು ಪ್ರಸಿದ್ಧರಾಗಿದ್ದರು. ಜೊತೆಗೆ ಲತಾ ಮಂಗೇಶ್ಕರ್ ಪ್ರಶಸ್ತಿ ಹಾಗೂ ಅನೇಕ ಫಿಲ್ಮ್ಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರ ಹಾಡುಗಳು ಮೂರೂ ಬಾರಿ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಗೆ ನಾಮಿನೇಟ್ ಆಗಿದ್ದವು.
ಸುಮಾರು ಲಕ್ಷಕ್ಕೂ ಹೆಚ್ಚು ಹಾಡುಗಳನ್ನು ರೆಕಾರ್ಡ್ ಮಾಡಿದ ಸಾಧನೆಯೊಂದಿಗೆ, ಆಶಾ ಭೋಸ್ಲೆ ಅವರು ಭಾರತೀಯ ಸಂಗೀತ ಇತಿಹಾಸದಲ್ಲಿ ಅಚ್ಚಳಿಯದ ಗುರುತು ಮೂಡಿಸಿದ್ದಾರೆ. ಇಹಲೋಕ ತ್ಯಜಿಸಿದರೂ ಗಾಯಕಿ ಹಾಡಿನ ಮೂಲಕ ಛಾಪು ಮೂಡಿಸಿ ಸಂಗೀತ ಪ್ರಿಯರ ಮನದಲ್ಲಿ ಅಚ್ಚಲಿಯದ ಗುರುತಾಗಿ ಉಳಿಯುತ್ತಾರೆ ಅನ್ನೋದರಲ್ಲಿ ಸಂಶಯವಿಲ್ಲ.