ಬೆಂಗಳೂರು, ಆ.13(Daijiworld News/SS): ರಾಜ್ಯದಲ್ಲಿ ನೆರೆ ಹಾವಳಿಯಿಂದ ಜನ ಸಂಕಷ್ಟದಲ್ಲಿದ್ದರೂ ರಾಜ್ಯ ಮತ್ತು ಕೇಂದ್ರ ಸರ್ಕಾರ ಕುಂಭಕರ್ಣ ನಿದ್ದೆಯಲ್ಲಿದೆ ಎಂದು ಮಾಜಿ ಸಂಸದ ವಿ ಎಸ್ ಉಗ್ರಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆರೆ ಹಾವಳಿಯಿಂದ ರಾಜ್ಯದಲ್ಲಿ 48 ಜನ ಮೃತಪಟ್ಟಿದ್ದು, 12 ಜನ ಕಣ್ಮರೆಯಾಗಿದ್ದಾರೆ. ಸಾವಿರಾರು ಜಾನವಾರುಗಳು ಸೇರಿದಂತೆ ಲೆಕ್ಕವಿಲ್ಲದಷ್ಟು ನಷ್ಟವಾಗಿದೆ. ಇಷ್ಟೆಲ್ಲ ಆದರೂ ಸಂಕಷ್ಟದಲ್ಲಿರುವವರಿಗೆ ರಿಲೀಫ್ ಸೆಂಟರ್ ಮಾಡಿದ್ದೇವೆ ಎಂದು ಹೇಳಿದ್ದಾರೆ. 6 ಲಕ್ಷಕ್ಕೂ ಹೆಚ್ಚು ಜನರನ್ನು ರಕ್ಷಿಸಿದ್ದೇವೆ ಎನ್ನುತ್ತಿದ್ದಾರೆ. ಕೇಂದ್ರ ಗೃಹ ಸಚಿವರು ಮೊನ್ನೆ ವೀಕ್ಷಣೆ ಮಾಡಿ ಹೋಗಿದ್ದಾರೆ. ಕನಿಷ್ಠ 5 ಸಾವಿರ ಕೋಟಿ ರೂ. ಆದರೂ ವಿಶೇಷ ಅನುದಾನ ಘೋಷಿಸುತ್ತಾರೆ ಎಂದು ನಾವು ಭಾವಿಸಿದ್ದೆವು. ಆದರೆ ಕೇಂದ್ರ ಸರ್ಕಾರ ನಿದ್ದೆಯಲ್ಲಿದೆ ಎಂದು ಟೀಕಿಸಿದರು.
ಬಿಜೆಪಿ ಅವರಿಗೆ ಬದ್ಧತೆ ಇದ್ದರೆ ಕೂಡಲೇ ನಷ್ಟ ಎಷ್ಟಾಗಿದೆ ಎಂದು ಲೆಕ್ಕಹಾಕಿ ಕೇಂದ್ರದ ಮೇಲೆ ಒತ್ತಡ ತರಬೇಕು. ಪ್ರಧಾನಿ ಕೂಡಲೇ 5 ಸಾವಿರ ಕೋಟಿ ರುಪಾಯಿಯನ್ನು ಬಿಡುಗಡೆ ಮಾಡಬೇಕು. ಸಿಎಂ ಯಡಿಯೂರಪ್ಪ ಕೂಡಲೇ ಸರ್ವಪಕ್ಷ ಸಭೆ ಕರೆದು ಚರ್ಚೆ ಮಾಡಿ, ಎಲ್ಲರನ್ನೂ ಪ್ರಧಾನಿಗಳ ಬಳಿ ಕರೆದುಕೊಂಡು ಹೋಗಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ನೆರೆಯಿಂದಾಗಿ ರಸ್ತೆಗಳು, ಬ್ರಿಜ್, ರೈಲ್ವೆ ಡ್ಯಾಮೇಜ್ ಆಗಿದೆ. 40 ಸಾವಿರ ಮನೆಗಳು, ಲಕ್ಷಾಂತರ ಎಕರೆ ಬೆಳೆ ನಾಶವಾಗಿದೆ. ಜಾನುವಾರುಗಳ ರಕ್ಷಣೆಗೆ ಯಾವುದೇ ಒತ್ತು ಕೊಟ್ಟಿಲ್ಲ ಎಂದು ದೂರಿದರು.
ಚುನಾವಣೆಯಲ್ಲಿ ಬಿಜೆಪಿಯವರು ಗೆಲ್ಲಲ್ಲು ಏನೆಲ್ಲ ಮಾಡಿದರು. ರಾಜ್ಯ ಸರ್ಕಾರವನ್ನು ವಾಮಮಾರ್ಗದಲ್ಲಿ ತರಲು ಏನೆಲ್ಲ ಪ್ರಯತ್ನ ಪಟ್ಟರು. ನಿತಿನ್ ಗಡ್ಕರಿ ಪರಿಹಾರ ಧನವನ್ನು ಘೋಷಣೆ ಮಾಡಿದ್ದಾರೆ. ಯಡಿಯೂರಪ್ಪ 50 ಕೋಟಿ ರಿಲೀಫ್ ಫಂಡ್ ಘೋಷಿಸಿದ್ದಾರೆ. ಹಲವು ಜಿಲ್ಲೆಗಳಲ್ಲಿ ಕುಡಿಯಲು ನೀರಿಲ್ಲ. ಬಿಜೆಪಿಯವರು ಇನ್ನೂ ನಿದ್ರಾವಸ್ಥೆಯಿಂದ ಎದ್ದಿಲ್ಲ ಎಂದು ಹೇಳಿದರು.