ಬೆಂಗಳೂರು, ಆ 13 (DaijiworldNews/SM): ಮಾಜಿ ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ. ಈ ಹಿಂದೆ ಕಳಪೆ ಔಷಧ ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಕುಮಾರ್ ಹಾಗೂ ಮಾಜಿ ಸಚಿವ ಯು ಟಿ ಖಾದರ್ ವಿರುದ್ಧ ದೂರು ಸಲ್ಲಿಸಲಾಗಿದೆ.
ವಕೀಲ ಕೆ ವಿ ಶಿವಾರೆಡ್ಡಿ ಎಂಬುವವರು ಲೋಕಾಯುಕ್ತದಲ್ಲಿ ದೂರು ಸಲ್ಲಿಕೆ ಮಾಡಿದ್ದಾರೆ. ದೂರಿನಲ್ಲಿ ರಮೇಶ್ ಕುಮಾರ್ ಮತ್ತು ಯು.ಟಿ.ಖಾದರ್ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ. ಇವರು ಆರೋಗ್ಯ ಸಚಿವರಾಗಿದ್ದ ಸಮಯದಲ್ಲಿ ಔಷಧ ಖರೀದಿಯಲ್ಲಿ 535 ಕೋಟಿ ರೂಪಾಯಿ ಅಕ್ರಮ ನಡೆದಿದೆ ಎಂದು ಗಂಭೀರ ಆರೋಪ ಮಾಡಲಾಗಿದೆ.
ಜೌಷಧಿಗಳ ಖರೀಧಿಗೂ ಮುನ್ನ ಪರೀಕ್ಷಿಸಬೇಕು. ಆದರೆ, ಪರೀಕ್ಷೆಗೆ ಒಳಪಡಿಸದ ಔಷಧಿಗಳನ್ನು ಖರೀದಿಸಿ ಸಾರ್ವಜನಿಕರಿಗೆ ವಿತರಣೆ ಮಾಡಲಾಗಿದೆ ಎಂಬುವುದಾಗಿ ಆರೋಪಿಸಲಾಗಿದ್ದು, ಇದು ಮಹಾಲೇಖಪಾಲಕರ ವರದಿಯಲ್ಲೂ ಉಲ್ಲೇಖವಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಮೈತ್ರಿ ಸರ್ಕಾರದಲ್ಲಿ ಸ್ಪೀಕರ್ ಆಗಿ ತಮ್ಮ ಅಧಿಕಾರ ಮತ್ತು ಪ್ರಭಾವ ಬಳಸಿ ಪ್ರಕರಣದಿಂದ ತಪ್ಪಿಸಿಕೊಳ್ಳುವ ಯತ್ನವನ್ನು ಸ್ಪೀಕರ್ ರಮೇಶ್ ಕುಮಾರ್ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.