ನವದೆಹಲಿ, ಆ.14(Daijiworld News/SS): ಪಾಕಿಸ್ತಾನದ ಮೂಲದ ಉಗ್ರರು ಭಾರತ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದ್ದು, ಈ ಹಿನ್ನಲೆಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ಪಾಕಿಸ್ತಾನ ಮೂಲದ ಸುಮಾರು 8-10 ಮಂದಿ ಉಗ್ರರು ಪ್ರತ್ಯೇಕ ತಂಡಗಳಾಗಿ, ಗುಜರಾತ್ ಕಚ್ ಬಂದರು ಪ್ರದೇಶದ ಮೂಲಕವಾಗಿ ಭಾರತ ಪ್ರವೇಶ ಮಾಡಲು ಸಿದ್ಧತೆ ನಡೆಸಿದ್ದಾರೆ ಎಂದು ಕೇಂದ್ರ ಗುಪ್ತಚರ ಇಲಾಖೆ ಗುಜರಾತ್ ಪೊಲೀಸರಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ.
ಈಗಾಗಲೇ ನೌಕೆ ಮತ್ತು ಗಡಿ ಭದ್ರತಾ ಪಡೆಗಳು ಜಂಟಿಯಾಗಿ ಶೋಧ ಕಾರ್ಯದಲ್ಲಿ ತೊಡಗಿವೆ. ಸಮುದ್ರ ಮಾರ್ಗದಲ್ಲಿ ಸಂಚರಿಸುವ ಎಲ್ಲ ರೀತಿಯ ಪ್ರಯಾಣಿಕ ಮತ್ತು ಸರಕು ಸಾಗಾಣಿಕಾ ಹಡಗುಗಳನ್ನು ತೀವ್ರ ಶೋಧ ನಡೆಸುತ್ತಿದ್ದಾರೆ. ಗುಜರಾತ್ ತೀರದಾದ್ಯಂತ ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದು, ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಿದ್ದಾರೆ ಎಂದು ತಿಳಿದುಬಂದಿದೆ.
ಪೂರ್ವ ಕಚ್ ಭಾಗದ ಎಸ್ ಪಿ ಪರೀಕ್ಷಿತಾ ರಾಥೋಡ್ ಈ ಕುರಿತು ಮಾತನಾಡಿದ್ದು, ಉಗ್ರರು ಕಚ್ ಮೂಲಕ ಭಾರತ ಪ್ರವೇಶಿಸುವ ಕುರಿತು ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ನಾವು ಕೂಡ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಹೆಚ್ಚುವರಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಿದ್ದೇವೆ. ಬಂದರು ಪ್ರದೇಶದಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಿದ್ದು, ಯಾವುದೇ ರೀತಿಯ ಶಂಕಿತ ವ್ಯಕ್ತಿ, ಬೋಟ್ ಕಾಣಿಸಿಕೊಂಡರೆ ಕೂಡಲೇ ಮಾಹಿತಿ ನೀಡುವಂತೆ ಸ್ಥಳೀಯ ಮೀನುಗಾರರಿಗೆ ಸಂದೇಶ ಕೂಡ ರವಾನಿಸಿದ್ದೇವೆ ಎಂದು ಹೇಳಿದ್ದಾರೆ.