ಬೆಂಗಳೂರು, ಆ.14(Daijiworld News/SS): ಚಂದ್ರಯಾನ-2 ಭೂಮಿಯ ಕಕ್ಷೆಯನ್ನು ತೊರೆದು ಚಂದ್ರನ ಕಕ್ಷೆಯೆಡೆಗೆ ಬುಧವಾರ ಮುಂಜಾನೆ ಯಶಸ್ವಿಯಾಗಿ ಪ್ರಯಾಣ ಬೆಳೆಸಿದೆ ಎಂದು ಇಸ್ರೋ ತಿಳಿಸಿದೆ.
ಇಸ್ರೋದ ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ-2 ನೌಕೆಯನ್ನು ಟ್ರಾನ್ಸ್ ಲೂನಾರ್ ಇನ್ಸೆರ್ಷನ್ ಪ್ರಕ್ರಿಯೆ ಮೂಲಕ ಬುಧವಾರ ಬೆಳಗಿನ ಜಾವ 2.21ಕ್ಕೆ ಭೂ ಕಕ್ಷೆಯಿಂದ ಚಂದ್ರನೆಡೆಗೆ ಕಳುಹಿಸಲಾಯಿತು. ಆ.20ರಂದು ನೌಕೆ ಚಂದ್ರನ ಕಕ್ಷೆಗೆ ಪ್ರವೇಶಿಸಲಿದೆ. ಕೊನೆಯ ಕಕ್ಷೆ ಬದಲಾವಣೆಯ ಪ್ರಕ್ರಿಯೆಯ ಭಾಗವಾಗಿ ನೌಕೆಯ ಇಂಜಿನ್ ಅನ್ನು 1203 ಸೆಕೆಂಡ್ ದಹಿಸುವ ಮೂಲಕ ಭೂ ಕಕ್ಷೆಯಿಂದ ಹೊರಗೆ ಕಳುಹಿಸಲಾಯಿತು ಎಂದು ಇಸ್ರೋ ತಿಳಿಸಿದೆ.
ಚಂದ್ರಯಾನ -2ರ ಎಲ್ಲ ಯಂತ್ರಗಳು ಸಹಜ ಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಆ. 20 ಕ್ಕೆ ಚಂದ್ರ ಕಕ್ಷೆ ಮುಟ್ಟಲಿರುವ ನೌಕೆ, ಮುಂದಿನ 17 ದಿನಗಳಲ್ಲಿ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿದೆ ಎಂದು ಇಸ್ರೋ ತಿಳಿಸಿದೆ.
ಜು. 22 ರಂದು ಚಂದ್ರಯಾನ -2 ನೌಕೆಯನ್ನು ಉಡಾವಣೆ ಮಾಡಲಾಗಿತ್ತು. ಆ ನಂತರ ಹಂತ ಹಂತವಾಗಿ 5 ಬಾರಿ ನೌಕೆಯ ಕಕ್ಷೆಯ ಬದಲಾವಣೆ ಮಾಡಲಾಗಿತ್ತು. ಕೊನೆಯ ಬಾರಿ ಆ. 6 ರ ಮಂಗಳವಾರ ಮಧ್ಯಾಹ್ನ 3.04ರ ಸುಮಾರಿಗೆ ನೌಕೆಯಲ್ಲಿರುವ ಇಂಜಿನ್ನ್ನು 1,041 ಸೆಕೆಂಡ್ ದಹಿಸುವ ಮೂಲಕ ಹಳೆಯ ಕಕ್ಷೆಯಿಂದ ಚಿಮ್ಮಿ ಹೊಸ ಕಕ್ಷೆಗೆ ಏರಿಸಲಾಗಿತ್ತು.