ನವದೆಹಲಿ, ಆ.14(Daijiworld News/SS): ಕಾಶ್ಮೀರಕ್ಕೆ ವಿಶೇಷಾಧಿಕಾರ ಕಲ್ಪಿಸುವ ವಿಧಿ 370 ರದ್ದುಗೊಳಿಸಲಾಗಿದ್ದು, ಇದೇ ನೆಪದಲ್ಲಿ ಆತಂಕವಾದಿಗಳು ಅಥವಾ ಭಯೋತ್ಪಾದಕರು ದಾಳಿ ಮಾಡುವ ಸಾದ್ಯತೆ ಇದೆ. ಈ ನಡುವೆ, ಆ.15ರಂದು ನಡೆಯಲಿರುವ 73ನೇ ಸ್ವಾತಂತ್ರ್ಯ ದಿನಾಚರಣೆ ಸಂಬಂಧ ರಾಜಧಾನಿ ದೆಹಲಿಯಲ್ಲಿ ಭಾರಿ ಭದ್ರತೆ ಕಲ್ಪಿಸಲಾಗಿದೆ.
ಕೇಂದ್ರ ಗುಪ್ತಚರ ಇಲಾಖೆ ಕೂಡ ಈ ಬಗ್ಗೆ ಎಚ್ಚರಿಕೆ ನೀಡಿದ್ದು, ಈಗಾಗಲೇ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ದೇಶದ ಎಲ್ಲ ರಾಜ್ಯಗಳಿಗೂ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.
ದೆಹಲಿಯ ಕೆಂಪುಕೋಟೆಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು, ದೆಹಲಿ ಸುತ್ತಮುತ್ತ ಸುಮಾರು 70 ಸಾವಿರಕ್ಕೂ ಅಧಿಕ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಮೊಘಲ್ ಯುಗದ ಕೋಟೆ ಬಳಿ ಸುಮಾರು 10 ಸಾವಿರ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕೆಂಪುಕೋಟೆ ಸುತ್ತಮುತ್ತಲ ಪ್ರದೇಶದಲ್ಲಿ ವಿಮಾನ ಹಾರಾಟ ನಿಷೇಧ ಮಾಡಲಾಗಿದೆ.
ಮಾತ್ರವಲ್ಲ, ಕೆಂಪು ಕೋಟೆ ಸುತ್ತಮುತ್ತ ಆಕಾಶದಲ್ಲಿ ಗಾಳಿಪಟಗಳು ಕೂಡ ಹಾರಾಡದಂತೆ ದೆಹಲಿ ಪೊಲೀಸರು ವಿಶೇಷ ನಿಗಾ ವಹಿಸಿದ್ದಾರೆ. ದೆಹಲಿ ನಗರದ ಎಲ್ಲಿಯೂ ಪ್ಯಾರಾ ಗ್ಲೈಡಿಂಗ್, ಬಲೂನ್ ಹಾರಾಡದಂತೆ ಕ್ರಮ ಕೈಗೊಳ್ಳಲಾಗಿದೆ.
ಕೆಂಪು ಕೋಟೆ ಸಾಗುವ ಮಾರ್ಗದಲ್ಲಿ ಸುಮಾರು 500ಕ್ಕೂ ಅಧಿಕ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ವಿಶೇಷ ಕಾರ್ಯಾಚರಣೆಯ ಸೇನಾಪಡೆಗಳ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಎನ್ಎಸ್'ಜಿ ವಿಶೇಷ ಕಮಾಂಡೋ ತಂಡವನ್ನು ನಿಯೋಜಿಸಲಾಗಿದೆ. ಕೆಂಪುಕೋಟೆ, ಜಾಮಾ ಮಸೀದಿ, ದೆಹಲಿ ಗೇಟ್ ಬಳಿ ಭದ್ರತಾ ಕಾರಣದಿಂದಾಗಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.