ಕೋಲ್ಕತ, ಆ.14(Daijiworld News/SS): ಧರ್ಮದ ಆಧಾರದ ಮೇಲೆ ಜನರನ್ನು ವಿಭಜಿಸುವುದನ್ನು ನಾನು ವಿರೋಧಿಸುತ್ತೇನೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಧರ್ಮ ಯಾವುದೆಂದು ಸಾಬೀತುಪಡಿಸುವುದಕ್ಕಿಂತ ನಾನು ಸಾಯುವುದೇ ಉತ್ತಮ ಎಂದು ಭಾವಿಸುತ್ತೇನೆ. ನನ್ನ ಧರ್ಮ ಸಾಬೀತು ಪಡಿಸುವ ಅವಶ್ಯಕತೆ ನನಗಿಲ್ಲ. ನನ್ನ ವಿರುದ್ಧ ಕಿಡಿ ಕಾರುತ್ತಿರುವವರು ಮತ್ತು ನನ್ನ ಧರ್ಮ ಯಾವುದೆಂದು ಪ್ರಶ್ನಿಸುತ್ತಿರುವವರಿಗಿಂತ ಹೆಚ್ಚಿನ ಸಂಸ್ಕೃತವನ್ನು ನಾನು ಬಲ್ಲೆ ಎಂದು ಹೇಳಿದ್ದಾರೆ.
ನಾನು ಹಿಂದು ಧರ್ಮಕ್ಕೆ ಸೇರಿದವಳು ಮತ್ತು ನಾನು ಎಲ್ಲರ ಧಾರ್ಮಿಕ ನಂಬಿಕೆಗಳನ್ನು ಗೌರವಿಸುತ್ತೇನೆ. ಧರ್ಮದ ಆಧಾರದ ಮೇಲೆ ಜನರನ್ನು ವಿಭಜಿಸುವುದನ್ನು ನಾನು ವಿರೋಧಿಸುತ್ತೇನೆ ಎಂದು ತಿಳಿಸಿದ್ದಾರೆ.
ನಾವು ಮನುಷ್ಯತ್ವದಲ್ಲಿ ನಂಬಿಕೆ ಇಟ್ಟಿದ್ದೇವೆ ಮತ್ತು ಧರ್ಮ ಎಂದರೆ ಮನುಷ್ಯತ್ವ. ಇದು ನಮಗೆ ಮನುಷ್ಯರನ್ನು ಪ್ರೀತಿಸುವುದನ್ನು ಮತ್ತು ಗೌರವಿಸುವುದನ್ನು ಕಲಿಸುತ್ತದೆ. ಧರ್ಮ ನಮಗೆ ಜನರನ್ನು ಒಡೆಯುವುದನ್ನು ಕಲಿಸಿಕೊಟ್ಟಿಲ್ಲ ಎಂದು ತಿಳಿಸಿದ್ದಾರೆ.