ಶ್ರೀನಗರ, ಆ.14(Daijiworld News/SS): ಆರ್ಟಿಕಲ್ 370 ಹಾಗೂ 35 ಎ ರದ್ದುಗೊಳಿಸುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚುವರಿ ಸೈನಿಕರನ್ನು ನಿಯೋಜನೆಗೊಳಿಸುವ ಜತೆ ಹಲವು ರೀತಿಯ ನಿರ್ಬಂಧ ವಿಧಿಸಿತ್ತು. ಇದೀಗ ನಿರ್ಬಂಧವನ್ನು ಜಮ್ಮು ಪ್ರದೇಶದಲ್ಲಿ ಸಂಪೂರ್ಣ ತೆರವುಗೊಳಿಸಲಾಗಿದ್ದು, ಕಾಶ್ಮೀರದ ಕೆಲವೆಡೆ ಮುಂದುವರೆಸಲಾಗಿದೆ.
ಕಾಶ್ಮೀರದ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದು, ಜಮ್ಮು-ಕಾಶ್ಮೀರದ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ. ಅಹಿತಕರ ಘಟನೆಗಳು ನಡೆದಿಲ್ಲ. ಜಮ್ಮುಕಾಶ್ಮೀರದಲ್ಲಿ ಇದವರೆಗೆ ಯಾವುದೇ ಅವಘಡ ನಡೆದಿಲ್ಲ. ಸಾವು ನೋವು ಆಗಿಲ್ಲ. ನಮ್ಮ ನಿಯಂತ್ರಣದಲ್ಲಿ ಇದೆ ಎಂದು ಹೆಚ್ಚುವರಿ ಪೊಲೀಸ್ ನಿರ್ದೇಶಕ ಮುನೀರ್ ಖಾನ್ ಹೇಳಿದ್ದಾರೆ.
ಕೆಲವರಿಗೆ ಪೆಲೆಟ್ ಗಾಯಗಳಾಗಿದ್ದು, ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕಾಶ್ಮೀರದ ಕೆಲವೆಡೆ ಇನ್ನೂ ಕೆಲವು ಕಾಲ ನಿರ್ಬಂಧ ಮುಂದುವರೆಸಲಾಗುತ್ತದೆ. ಸದ್ಯ ಜಮ್ಮುಕಾಶ್ಮೀರದಾದ್ಯಂತ ಶಾಂತಿಯುತವಾಗಿ ಸ್ವಾತಂತ್ರ್ಯ ದಿನ ಆಚರಿಸುವತ್ತ ಹೆಚ್ಚಿನ ಗಮನಹರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.