ನವದೆಹಲಿ, ಆ 14 (Daijiworld News/MSP): ರಾಜಕೀಯ ಸೇರಲೆಂದು ಐಎಎಸ್ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಸುದ್ದಿ ಮಾಡಿದ್ದ ಕಾಶ್ಮೀರದ ರಾಜಕೀಯ ಮುಖಂಡ ಶಾ ಫೈಸಲ್ ಅವರು ವಿದೇಶಕ್ಕೆ ತೆರಳುವ ಮಾಹಿತಿ ಪಡೆದ ಪೊಲೀಸರು ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದಾರೆ. ಮಾತ್ರವಲ್ಲದೆ ಅವರನ್ನು ಮತ್ತೆ ಕಾಶ್ಮೀರಕ್ಕೆ ವಾಪಸ್ ಕಳುಹಿಸಿದ್ದಾರೆ.
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ಕೇಂದ್ರ ಸರಕಾರ ರದ್ದುಗೊಳಿಸಿರುವ ಕ್ರಮಕ್ಕೆ ಶಾ ಸಾಮಾಜಿಕ ಜಾಲತಾಣದಲ್ಲಿ ಕಟುವಾಗಿ ವಿರೋಧ ವ್ಯಕ್ತಪಡಿಸಿದ್ದರು. ರಾಜಕೀಯ ಹಕ್ಕುಗಳನ್ನು ಮತ್ತೆ ಸ್ಥಾಪಿಸಿಕೊಳ್ಳಲು ಹಿಂಸಾರಹಿತವಾದ ರಾಜಕೀಯದ ಚಳವಳಿಯ ಬೇಕಾಗಿದೆ ಎಂದಿದ್ದರು.
ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್ ಎ)ಯಡಿ ಶಾ ಅವರನ್ನು ಬಂಧಿಸಲಾಗಿದೆ. ಈ ಕಾಯ್ದೆಯ ಅನ್ವಯ ಯಾವುದೇ ವ್ಯಕ್ತಿಯನ್ನು ಯಾವುದೇ ವಿಚಾರಣೆ ನಡೆಸದೆ ಸರ್ಕಾರ ಮೂರರಿಂದ ಆರು ತಿಂಗಳುಗಳ ಕಾಲ ಬಂಧನದಲ್ಲಿರಿಸಬಹುದಾಗಿದೆ.
ಶಾ ಫೈಸಲ್ ದೆಹಲಿಯಿಂದ ಇಸ್ತಾಂಬುಲ್ ಗೆ ತೆರಳಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ವೇಳೆ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ. 2009 ರಲ್ಲಿ ಐಎಎಸ್ ಟಾಪರ್ ಆಗಿದ್ದ ಶಾ 2019 ರಲ್ಲಿ ತಮ್ಮ ಆಡಳಿತಾತ್ಮಕ ಹುದ್ದೆಗೆ ರಾಜೀನಾಮೆ ಸಲ್ಲಿಸಿ ರಾಜಕೀಯಕ್ಕೆ ಪ್ರವೇಶಿಸಿದ್ದರು.