ನವದೆಹಲಿ, ಆ.15(Daijiworld News/SS): 73ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ದಿಲ್ಲಿಯ ಕೆಂಪು ಕೋಟಿಯಲ್ಲಿ ಧ್ವಜಾರೋಹಣ ನೆರವೇರಿಸಿ ಬಳಿಕ ಸ್ವಾತಂತ್ರ್ಯ ದಿನಾಚರಣೆ ಹಾಗೂ ರಕ್ಷಾ ಬಂಧನದ ಶುಭಾಶಯ ಕೋರಿದರು.
ಈ ವೇಳೆ ಮಾತನಾಡಿದ ಪ್ರಧಾನಿ, ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಜನರು ಪ್ರವಾಹ ಪೀಡಿತರಾಗಿದ್ದಾರೆ. ಅವರ ಸುರಕ್ಷತೆ ಹಾಗೂ ಪರಿಹಾರ ಕಾರ್ಯಗಳಿಗೆ ಕೇಂದ್ರ ಸರ್ಕಾರ ರಾಜ್ಯಸರ್ಕಾರಗಳಿಗೆ ನೆರವು ನೀಡಲಿದೆ ಎಂದು ಭರವಸೆ ನೀಡಿದರು.
ದೇಶದ ಮುಸ್ಲಿಂ ಸಹೋದರಿಯರು ಭಯದ ವಾತಾವರಣದಲ್ಲಿ ಬದುಕುತಿದ್ದರು. ಆದರೆ, ತ್ರಿವಳಿ ತಲಾಖ್ ನಿಷೇಧದಿಂದ ಆ ಭಯ ದೂರವಾಗಿದೆ. ಈ ಮೂಲಕ ಮುಸ್ಲಿಂ ಮಹಿಳೆಯರಿಗೆ ಸಮಾನ ಅಧಿಕಾರ ದೊರೆತಿದೆ ಎಂದು ಹೇಳಿದರು.
ದೇಶದ ಅಭಿವೃದ್ಧಿಗೆ ಹಾಗೂ ರಕ್ಷಣೆಗೂ ನಮ್ಮ ಸರ್ಕಾರ ಯಾವುದೇ ರಾಜಿ ಮಾಡಿಕೊಳ್ಳದೆ ಕೆಲಸ ಮಾಡಲಿದೆ. ಎನ್ಐಎ ಹಾಗೂ ಯುಎಪಿಎ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ದೇಶದ ರಕ್ಷಣೆಗೆ ಇನ್ನಷ್ಟು ಬಲ ನೀಡಿದ್ದೇವೆ. ಸರ್ಕಾರ ಬದಲಾಯಿಸುವುದರಿಂದ ದೇಶ ಬದಲಾಗುತ್ತದೆಯೇ ಎನ್ನುವುದು ಜನರ ಮನಸ್ಸಿನಲ್ಲಿರುವ ಗೊಂದಲವಾಗಿತ್ತು. 2019ರಲ್ಲಿ 5 ವರ್ಷದ ಕಠಿಣ ಪರಿಶ್ರಮದ ಬಳಿಕ, ದೇಶದ ಜನರ ನಿರಾಸೆ ಆಸೆಯಾಗಿ ಬದಲಾಗಿದೆ. ಪ್ರತಿ ಕ್ಷಣ ಅವರಿಗೋಸ್ಕರ ಶ್ರಮಿಸಿದ್ದೇವೆ ಎಂದು ಹೇಳಿದರು.