ಬೆಂಗಳೂರು, ಆ.15(Daijiworld News/SS): ತ್ಯಾಗ – ಬಲಿದಾನದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಹೊಣೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಮಹಾತ್ಮ ಗಾಂಧೀಜಿಯ ರಾಮರಾಜ್ಯದ ಕನಸನ್ನು ಮುನ್ನೆಡೆಸಲು ನಾವು ಮುಂದಾಗಿದ್ದೇವೆ. ಅಭಿವೃದ್ಧಿಯನ್ನೇ ನಮ್ಮ ಮೂಲ ಧ್ಯೇಯವಾಗಿಟ್ಟುಕೊಂಡಿದ್ದೇವೆ. ತ್ಯಾಗ – ಬಲಿದಾನದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಹೊಣೆ. ಸ್ವಾತಂತ್ರ್ಯೋತ್ಸವದ ದಿನವಾದ ಇಂದು ಪ್ರಕೃತಿ ಮುನಿಸು ತೀಕ್ಷ್ಣ ವಾದದ್ದು, ಅತಿವೃಷ್ಟಿ ಅನಾವೃಷ್ಟಿಯನ್ನು ಎದುರಿಸಲು ನನ್ನ ಸರ್ಕಾರ ಸನ್ನದ್ಧರಾಗಿದೆ ಎಂದು ಹೇಳಿದರು.
ರಾಜ್ಯ ಕಂಡರಿಯದ ಪ್ರವಾಹಕ್ಕೀಡಾಗಿದೆ. ಅರ್ಧ ರಾಜ್ಯ ಜಲಪ್ರಳಯಕ್ಕೊಳಗಾಗಿದೆ. 22 ಜಿಲ್ಲೆಗಳ 103 ತಾಲೂಕುಗಳು ಭೀಕರ ಪ್ರವಾಹಕ್ಕೆ ತುತ್ತಾಗಿವೆ. 61 ಜನ ಮೃತಪಟ್ಟಿದ್ದಾರೆ. ಪ್ರವಾಹ ಸಂತ್ರತಸ್ತರಿಗೆ ತಕ್ಷಣಕ್ಕೆ ಹತ್ತು ಸಾವಿರ ಪರಿಹಾರ ನೆರವು ನೀಡಲಾಗಿದೆ. ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗಿದೆ. 1224 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. 697948 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದರು.
ಸಾವಿರಕ್ಕೂ ಹೆಚ್ಚು ಪರಿಹಾರ ಕೇಂದ್ರಗಳನ್ನು ತೆರೆದಿದ್ದು, ಅಲ್ಲಿ 396617 ಸಾವಿರ ಜನರು ಆಶ್ರಯ ಪಡೆಯುತ್ತಿದ್ದಾರೆ. ಪ್ರವಾಹದಿಂದ ಕೃಷಿಕರು ಹೆಚ್ಚಿನ ತೊಂದರೆಗೆ ಒಳಗಾಗಿದ್ದಾರೆ. ಬಾಗಲಕೋಟೆ, ವಿಜಯಪುರ, ರಾಯಚೂರು, ಯಾದಗಿರಿ, ದಕ್ಷಿಣ ಕನ್ನಡ, ಮೈಸೂರು ಮತ್ತು ಗದಗ ಜಿಲ್ಲೆಗಳಲ್ಲಿ ಸಂಚರಿಸಿ ಸಂತ್ರಸ್ತರಿಗೆ ಪರಿಹಾರ ಕಾರ್ಯ ಕೈಗೊಳ್ಳಲಾಗಿದೆ ಎಂದು ಹೇಳಿದರು.